ಬಯಲಾಯ್ತು ಬಿಜೆಪಿ ಒಳಜಗಳ; ಜಿಲ್ಲಾ ಉಸ್ತುವಾರಿ ಮಂತ್ರಿ ಬಿ.ಸಿ.ಪಾಟೀಲ್ ರಿಗೆ ಅಮರೇಶ ಕರಡಿ ಟಾಂಗ್!

ಈ ಸುದ್ದಿ ಹಂಚಿಕೊಳ್ಳಿ:

ವಿಜಯಪರ್ವ ‌ಸುದ್ದಿ,‌ ಕೊಪ್ಪಳ
ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಬಿ.ಸಿ.ಪಾಟೀಲ್ ರಿಗೆ ಸಂಸದ ಸಂಗಣ್ಣ ಕರಡಿ ಪುತ್ರ ಅಮರೇಶ ಕರಡಿ ಟಾಂಗ್ ಕೊಟ್ಟರಾ?

ಕೊಪ್ಪಳದ ಸಾರ್ವಜನಿಕ ಮೈದಾನದಲ್ಲಿ ಪ್ರಧಾ‌ನಿ ನರೇಂದ್ರ ಮೋದಿ ಜನ್ಮ ದಿನದ ಹಿನ್ನೆಲೆ ಬಿಜೆಪಿ ಯುವ‌ ಮೋರ್ಚಾದ  ಕೊಪ್ಪಳ ಜಿಲ್ಲಾ ಘಟಕ ಗುರುವಾರ ಆಯೋಜಿಸಿದ್ದ ರಕ್ತದಾನ ಶಿಬಿರ ಕಾರ್ಯಕ್ರಮ ಇಂಥಹದ್ದೊಂದು ಚರ್ಚೆ ಹುಟ್ಟುಹಾಕಿದೆ.

ಹೌದು, ಕಂದಾಯ ಮಂತ್ರಿ ಆರ್.ಅಶೋಕ ಅವರು ಹೊಸಪೇಟೆಯಿಂದ ಆಗಮಿಸಿ ಕಾರ್ಯಕ್ರಮಕ್ಕೆ ಸಾಂಕೇತಿಕ ಚಾಲನೆ ನೀಡಿದರು. ಆದರೆ, ಜಿಲ್ಲಾ ಉಸ್ತುವಾರಿ ಮಂತ್ರಿ ಬಿ.ಸಿ.ಪಾಟೀಲ್ ಬೆಳಗ್ಗೆಯಿಂದಲೂ ಜಿಲ್ಲಾ ಕೇಂದ್ರದಲ್ಲೇ ಇದ್ದರೂ ಕಾರ್ಯಕ್ರಮದ ಕಡೆ ಸುಳಿಯಲಿಲ್ಲ.‌ ಇದು ಇಂಥ ಚರ್ಚೆ ಹುಟ್ಟು ಹಾಕಿದೆ.‌‌

ಅಷ್ಟೇ‌ ಅಲ್ಲದೇ‌ ಅಮರೇಶ ಕರಡಿ ಅವರು ಬೇಕಂತಲೇ ಕೃಷಿ‌ ಮಂತ್ರಿ ಬಿ.ಸಿ.ಪಾಟೀಲ್ ಅವರಿಗೆ ಪಕ್ಷದ ಕಾರ್ಯಕ್ರಮಕ್ಕೆ ಆಹ್ವಾನ ನೀಡದೇ ದೂರ ಇಟ್ಟಿದ್ದಾರೆ. ಈ ಮೂಲಕ ಜಿಲ್ಲಾ ಉಸ್ತುವಾರಿ ಮಂತ್ರಿಗೆ ಟಾಂಗ್ ನೀಡಿದ್ದಾರೆ ಎಂಬ ಮಾತು ಕೇಳಿ ಬಂದಿವೆ. ಈ ಎಲ್ಲ ಬೆಳವಣಿಗೆಗಳು ಕೊಪ್ಪಳ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಪುಷ್ಟೀಕರಿಸುತ್ತಿವೆ.

ಇನ್ನು ರಕ್ತದಾನ ಶಿಬಿರ ಆಯೋಜನೆಯ ನೇತೃತ್ವ ವಹಿಸಿದವರಲ್ಲಿ ಒಬ್ಬರಾಗಿರೋ ಅಮರೇಶ ಕರಡಿ ಕಂದಾಯ ಮಂತ್ರಿ ಆರ್. ಅಶೋಕರನ್ನು ಕಾರ್ಯಕ್ರಮಕ್ಕೆ ಕರೆತರಲು ಬಳ್ಳಾರಿ ಜಿಲ್ಲೆ ಹೊಸಪೇಟೆ ವರೆಗೂ ಹೋಗಿದ್ದಾರೆ. ಕಂದಾಯ ಮಂತ್ರಿಗಳ ಕಾರ್ ನಲ್ಲೇ ಆಗಮಿಸಿದ ಅಮರೇಶ ಕರಡಿ, ಅಧಿಕೃತ ಸರ್ಕಾರಿ ಸಭೆಗೂ ಮೊದಲು ಶಿಬಿರಕ್ಕೆ ಕರೆತಂದು‌ ಸಾಂಕೇತಿಕ‌ವಾಗಿ ಚಾಲನೆ ಕೊಡಿಸಿದರು. ಆದರೆ, ಅಲ್ಲಿಯವರೆಗೂ ಕೊಪ್ಪಳದಲ್ಲೇ ಇದ್ದ ಜಿಲ್ಲಾ ಮಂತ್ರಿಗೆ ಈ ಬಗ್ಗೆ ಮಾಹಿತಿಯೇ ನೀಡಿಲ್ಲ.

ಮುಜುಗರ: ವಾಸ್ತವದಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿ ಬಿ.ಸಿ.ಪಾಟೀಲ್ ಕಲ್ಯಾಣ ಕರ್ನಾಟಕ ಉತ್ಸವದ ಧ್ವಜಾರೋಹಣದ ನಂತರ ಬೆಂಗಳೂರಿಗೆ ಹೋಗುತ್ತಾರೆ ಎಂದು ಪ್ರವಾಸ ಪಟ್ಟಿ ನಿಗದಿಯಾಗಿತ್ತು. ಬೆಳಗ್ಗೆ‌ 10.30ರ‌‌ ವರೆಗೆ ಕೊಪ್ಪಳದಲ್ಲೇ‌ ಇರುತ್ತಾರೆ ಎಂಬುದು ಗೊತ್ತಿದ್ದರೂ ಕಾರ್ಯಕ್ರಮ ಆಯೋಜಕರು ‌ಸೌಜನ್ಯಕ್ಕೂ ಅವರಿಗೆ ಮಾಹಿತಿ ನೀಡಿಲ್ಲ.

ಇನ್ನು ಕಂದಾಯ ಮಂತ್ರಿ ಆರ್.ಅಶೋಕ ಆಗಮಿಸಿ, ಪ್ರಗತಿ ಪರಿಶೀಲನೆ ಸಭೆ ನಡೆಸುವ ಮಾಹಿತಿ ಹಿನ್ನೆಲೆ ಸಭೆಯಲ್ಲಿ ಭಾಗವಹಿಸಲು ಜಿಲ್ಲಾಡಳಿತ ಭವನದ ತಮ್ಮ ಕಚೇರಿಯಲ್ಲೇ ಕಾದು ಕುಳಿತಿದ್ದರು. ಆಗಲೂ ಅವರಿಗೆ ರಕ್ತದಾನ ಶಿಬಿರಕ್ಕೆ ಆಹ್ವಾನಿಸಿಲ್ಲ. ಇದು ಬಿ.ಸಿ.ಪಾಟೀಲ್ ಅವರಿಗೆ ಒಂದಷ್ಟು ‌ಇರಿಸುಮುರಿದು‌ ಉಂಟು ಮಾಡಿದೆ ಎಂಬ ಮಾತು ಕೇಳಿ ಬಂದವು.

ದೂರ-ದೂರ: ಬಿ.ಸಿ.ಪಾಟೀಲ್‌ ಅವರು ಕೃಷಿ ಮಂತ್ರಿಯಾಗಿ ನೇಮಕಗೊಂಡ‌ ನಂತರ ಜಿಲ್ಲೆಗೆ‌ ಮೊದಲ ಬಾರಿಗೆ ‌ಆಗಮಿಸಿದ್ದಾಗ, ಸಂಸದ ಸಂಗಣ್ಣ‌ ಕರಡಿ ಅವರ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಮಾತ್ರ ಅಮರೇಶ ಕರಡಿ, ಉಸ್ತುವಾರಿ ಮಂತ್ರಿ ಜೊತೆ ಕಾಣಿಸಿಕೊಂಡಿದ್ದರು. ಆ ನಂತರ ಎಲ್ಲೂ ಉಸ್ತುವಾರಿ‌ ಮಂತ್ರಿಗಳ ಜೊತೆ ಕಾಣಿಸಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಈ ಇಬ್ಬರು ನಾಯಕರ ನಡುವೆ ಉತ್ತಮ ಬಾಂಧವ್ಯ ಇಲ್ಲ.‌ ಅಧಿಕಾರಿಗಳ ವರ್ಗಾವಣೆ ಸೇರಿ ಕೆಲ ವಿಚಾರದಲ್ಲಿ ದೂರ-ದೂರ ಆಗಿದ್ದಾರೆ ಎಂಬ ಮಾತುಗಳು ಇದೀಗ ಪಕ್ಕಾ ಆಗಿವೆ.

ಜಿಲ್ಲಾ ಉಸ್ತುವಾರಿ ಮಂತ್ರಿಗಳು‌ 10.30ಕ್ಕೆ‌ ಹಿರೇಕೇರೂರಿಗೆ ಹೋಗಬೇಕಿತ್ತು.‌ ಕಂದಾಯ ಮಂತ್ರಿಗಳು 11.30ಕ್ಕೆ ಕೊಪ್ಪಳಕ್ಕೆ ಬರುವ ಪ್ರವಾಸ ಪಟ್ಟಿ ಬಂದಿತ್ತು. ಹಾಗಾಗಿ ಜಿಲ್ಲಾ ಮಂತ್ರಿಗಳು ವಾರಕ್ಕೆಮ್ಮೊ, 15 ದಿನಕ್ಕೊಮ್ಮೆ ಹೆಂಗೋ ಬಂದೇ ಬರ್ತಾರೆ. ಆದರೆ, ಕಂದಾಯ ಮಂತ್ರಿಗಳು ಅಧಿಕಾರ ವಹಿಸಿಕೊಂಡ‌ ನಂತರ ಇದೇ ಮೊದಲ ಬಾರಿಗೆ ಕೊಪ್ಪಳಕ್ಕೆ ಬರ್ತಿರೋದರಿಂದ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇವೆ. ಇದಕ್ಕೆ ಯಾವುದೇ ಅರ್ಥ ಕಲ್ಪಿಸುವುದು ಬೇಡ.
| ಅಮರೇಶ ಕರಡಿ, ಬಿಜೆಪಿ ಮುಖಂಡ

1+
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 318
error: Content is protected !!