ಕೆಲಸ ಬಹಿಷ್ಕರಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಈ ಸುದ್ದಿ ಹಂಚಿಕೊಳ್ಳಿ:

ವಿಜಯ ಪರ್ವ ಸುದ್ದಿ,ಕೊಪ್ಪಳ:

ಕನಿಷ್ಠ 12 ಸಾವಿರ ರೂಪಾಯಿ ಗೌರವ ಧನ ನೀಡಲು ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಕರೆ ನೀಡಿರುವ ಪ್ರತಿಭಟನೆಗೆ ಕೊಪ್ಪಳದಲ್ಲಿ ಬೆಂಬಲ ವ್ಯಕ್ತವಾಗಿದೆ.ಕೊಪ್ಪಳ ಜಿಲ್ಲೆಯ ಆಶಾ ಕಾರ್ಯಕರ್ತೆಯರೂ ಇಂದಿನಿಂದ ಕೋವಿಡ್ 19 ವಿಶೇಷ ಕೆಲಸ‌ ಸೇರಿ ತಮ್ಮ ಸಾಮಾನ್ಯ ಕರ್ತವ್ಯವನ್ನು ಬಹಿಷ್ಕರಿಸಿ ಮುಷ್ಕರ ಆರಂಭಿಸಿದ್ದಾರೆ.

ಆಶಾ ಕಾರ್ಯಕರ್ತೆಯರ ಸಂಘಟನೆಯ ಕೆಲ ಮುಖಂಡರು ಕೊಪ್ಪಳದ ಜಿಲ್ಲಾಡಳಿತ ಭವನದಲ್ಲಿನ ಡಿಎಚ್ ಒ ಕಚೇರಿಗೆ ಆಗಮಿಸಿ ತಾವು ಕರ್ತವ್ಯಕ್ಕೆ ಹಾಜರಾಗದಿರುವ ಬಗ್ಗೆ ಮಾಹಿತಿ ನೀಡಿದರು. ಜೊತೆಗೆ ತಮ್ಮ ಬೇಡಿಕೆಗಳ ಮನವಿ ಸಲ್ಲಿಸಿದರು.  ಈ ವೇಳೆ ಆಶಾ ಕಾರ್ಯಕರ್ತೆಯರ ಮುಖಂಡರಾದ ಕೌಶಲ್ಯ ಹಿರೇಗೌಡರ ಮಾತನಾಡಿ,  ಕಳೆದ 2019 ರಿಂದಲೂ  ಆಶಾ ಕಾರ್ಯಕರ್ತೆಯರು ತಮ್ಮ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದರೂ ಸರ್ಕಾರ ನಿರ್ಲಕ್ಷ ಮಾಡಿದೆ. ಇನ್ನು ಆಶಾ ಕಾರ್ಯಕರ್ತೆಯರು ಕೋವಿಡ್ ನಂತರ ಮಹಾಮಾರಿ ರೋಗ ಹರಡದಂತೆ ತಡೆಯಲು ತಮ್ಮ ಮನೆ- ಮಕ್ಕಳನ್ನೂ ಲೆಕ್ಕಿಸದೇ ಕೆಲಸ ಮಾಡಿದ್ದಾರೆ.

ಆದರೆ, ಸರ್ಕಾರ ಕೆಲಸಕ್ಕೆ ಅಗತ್ಯವಿರೋ ಕನಿಷ್ಟ ಸ್ವಯಂ ಸುರಕ್ಷತಾ ಕಿಟ್ ಗಳನ್ನೂ ಆಶಾಗಳಿಗೆ ನೀಡಲಿಲ್ಲ. ಇನ್ನು ಆಶಾಗಳು ತಮ್ಮ ನ್ಯಾಯಯುತ ಗೌರವ ಧನ ಪಡೆಯಲು ನಾಲ್ಕೈದು ಸಿಬ್ಬಂದಿ ಬಳಿಗೆ ಹೋಗಿ ಸಹಿ ಪಡೆಯಬೇಕು. ಈ ಸಹಿ ಪಡೆಯುವ ಪ್ರಕ್ರಿಯೆಯೇ ಹಿಂಸೆಯಾಗಿದೆ ಎಂದು ನೋವು ತೋಡಿಕೊಂಡರು. ಕೂಡಲೇ ಸರ್ಕಾರ ನಮ್ಮ ಮನವಿಗೆ ಸ್ಪಂಧಿಸದಿದ್ದರೆ, ಆಶಾಗಳು ಬೆಂಗಳೂರಿನ ವರೆಗೆ ಪಾದಯಾತ್ರೆ ಮಾಡಿಕೊಂಡು ಹೋಗಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಆಶಾ ಕಾರ್ಯಕರ್ತೆಯರ ಸಂಘಟನೆಯ ತಾಲೂಕಾಧ್ಯಕ್ಷೆ ವಿಜಯಲಕ್ಷ್ಮಿ, ಮುಖಂಡರಾದ ದಾಕ್ಷಾಯಿಣಿ, ಲಲಿತಾ, ಹುಲಿಗೆಮ್ಮ ಸೇರಿ ಇತರರು ಇದ್ದರು. 

+3
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 72