ರಾಡ್ ನಿಂದ ದಂಪತಿ ಮೇಲೆ ಹಲ್ಲೆ; ಪತ್ನಿ ಸ್ಥಳದಲ್ಲೇ ಸಾವು, ಪತಿ ಸ್ಥಿತಿ ಚಿಂತಾಜನಕ- ಮರ್ಯಾದಾ ಹತ್ಯೆ ಶಂಕೆ?

ಈ ಸುದ್ದಿ ಹಂಚಿಕೊಳ್ಳಿ:

ವಿಜಯಪರ್ವ ಸುದ್ದಿ, ಕಾರಟಗಿ
ಜಿಲ್ಲೆಯ ಕಾರಟಗಿ ನಗರದಲ್ಲಿ ದಂಪತಿ ಮೇಲೆ‌ ದುಷ್ಕರ್ಮಿಗಳು ರಾಡ್ ನಿಂದ ಹಲ್ಲೆ ಮಾಡಿದ್ದು, ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಪತಿ ಗಂಭೀರ ಗಾಯವಾಗಿ ಸ್ಥಿತಿ ಚಿಂತಾಜನಕವಾಗಿದ್ದು, ಗಂಗಾವತಿ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದಾನೆ.

ಮೂಲತಃ ಬಾಗಲಕೋಟೆ ಜಿಲ್ಲೆ ಮುಧೋಳ ಪಟ್ಟಣದ  ಖಾಸಗಿ ಬ್ಯಾಂಕ್ ಉದ್ಯೋಗಿ ತ್ರಿವೇಣಿ(28) ಮೃತ ಮಹಿಳೆ.‌ ಐಡಿಎಫ್ ಸಿ ಬ್ಯಾಂಕ್ ಕಾರಟಗಿ ಶಾಖೆಯ ಉದ್ಯೋಗಿ‌ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ವಿನೋದ(35) ಗಂಭೀರವಾಗಿ ಗಾಯಗೊಂಡಿದ್ದಾನೆ.‌

ಈ ಮೊದಲು ಮುಧೋಳ‌ ಪಟ್ಟಣದಲ್ಲೇ‌ ಸಹಕಾರಿ ಬ್ಯಾಂಕ್ ವೊಂದರ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ತ್ರಿವೇಣಿ ಮತ್ತು ವಿನೋದ ಪ್ರೀತಿಸಿ ಮದುವೆಯಾಗಿದ್ದರು.‌ ಮದುವೆ ನಂತರ ಮೃತ ತ್ರಿವೇಣಿ ಬಳ್ಳಾರಿ ಜಿಲ್ಲೆ ಸಿರುಗುಪ್ಪ ಶಾಖೆಗೆ ವರ್ಗಾವಣೆ ತೆಗೆದುಕೊಂಡಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.

ಮರ್ಯಾದೆ ‌ಹತ್ಯೆ: ದುಷ್ಕರ್ಮಿಗಳು ಇವರ ಮನೆ ಹತ್ತಿರವೇ ಬಂದು ಹಲ್ಲೆ ಮಾಡಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಪೊಲೀಸರಿಗೆ ದೊರೆತ ಫುಟೇಜ್ ನಲ್ಲಿ ಆರೋಪಿಗಳ ಚಹರೆ ಸ್ಪಷ್ಟವಾಗಿ ಕಾಣುತ್ತಿಲ್ಲ ಎನ್ನಲಾಗಿದೆ. ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದು, ಮಹಿಳೆಯ ಕುಟುಂಬದವರಿಗೆ ಈ ಮದುವೆಗೆ ವಿರೋಧವಿತ್ತು. ಈ ಹಿನ್ನೆಲೆಯಲ್ಲಿ ಇದ್ದೊಂದು ಮರ್ಯಾದೆ ಹತ್ಯೆ ಇರಬಹುದು ಎನ್ನಲಾಗಿದೆ.

ಸ್ಥಳಕ್ಕೆ‌‌ ಎಸ್ಪಿ‌ ಟಿ.ಶ್ರೀಧರ, ಗಂಗಾವತಿ ಡಿವೈಎಸ್ಪಿ ಆರ್.‌ಎಸ್.‌ ಉಜ್ಜಿನಕೊಪ್ಪ,‌ ಗಂಗಾವತಿ ಗ್ರಾಮೀಣ ಸಿಪಿಐ ಉದಯ‌ರವಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು,‌ತನಿಖೆ ಕೈಗೊಂಡಿದ್ದಾರೆ.

+5
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 1870