ಕಾರಟಗಿ ದಂಪತಿ ಕೊಲೆ ಪ್ರಕರಣ; ಚಿಲ್ಲರೆ ಹಣಕ್ಕೆ‌ ಸುಪಾರಿ ಕೊಟ್ಟಿದ್ದ ಮೃತಳ ತಮ್ಮ; ಎಸ್ಪಿ ಟಿ.ಶ್ರೀಧರ ಸುದ್ದಿಗೋಷ್ಠಿ

ಈ ಸುದ್ದಿ ಹಂಚಿಕೊಳ್ಳಿ:

ವಿಜಯಪರ್ವ ಸುದ್ದಿ, ಕೊಪ್ಪಳ
ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ದಂಪತಿ ಮೇಲೆ ಹಲ್ಲೆ‌, ಮಹಿಳೆ ಸ್ಥಳದಲ್ಲೇ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬುಧವಾರ ನ್ಯಾಯಾಂಗ ಬಂಧನಕ್ಕೆ ನೀಡಿದರು.

ಕೊಪ್ಪಳದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಎಸ್ಪಿ ಟಿ.ಶ್ರೀಧರ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮೃತ ಮಹಿಳೆ ತಮ್ಮ ಅವಿನಾಶ ಚಂದನಶಿವ, ಸಂಬಂಧಿ ಯುವರಾಜ ನಿಂಬಾಳ್ಳರ ಬಂಧಿತ ಆರೋಪಿಗಳು. ಮೃತ ತ್ರಿವೇಣಿ ಕುಟುಂಬದ ವಿರೋಧದ ನಡುವೆ ಬೇರೆ ಜಾತಿಯ ಯುವಕನನ್ನು ಮದುವೆ ಆಗಿದ್ದಕ್ಕೆ ಕೊಲೆ ಮಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಚಿಲ್ಲರೆ ಹಣಕ್ಕೆ ಸುಪಾರಿ ಕೊಟ್ಟು, ಕೊಲೆ ಮಾಡಿಸಿದ್ದಾರೆ. ಕೇವಲ 50 ಸಾವಿರಕ್ಕೆ ಸುಪಾರಿ ಕೊಟ್ಟಿದ್ದಾಗಿ ಹೇಳಿದ್ದಾರೆ. ಹತ್ಯೆ ಮಾಡಿದ ಆರೋಪಿಗಳ ದಸ್ತಗಿರಿ ಮಾಡಿ, ತನಿಖೆ ಮಾಡಲಾಗುವುದು ಎಂದು ತಿಳಿಸಿದರು.

ಹಲ್ಲೆಗೆ ಒಳಗಾದ ದಂಪತಿ

ಪ್ರಕರಣದ ಹಿನ್ನೆಲೆ: ಕಳೆದ ಅಕ್ಟೋಬರ್ 17 ರಂದು ಸಂಜೆ ಕಾರಟಗಿಯ ಚನ್ನಬಸವೇಶ್ವರ ನಗರದಲ್ಲಿ ಅಪರಿಚಿತರು ದಂಪತಿ ಮೇಲೆ ರಾಡ್ ನಿಂದ ಹಲ್ಲೆ ಮಾಡಿದ್ದರು. ‌ಘಟನೆಯಲ್ಲಿ ಮೂಲತಃ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಖಾಸಗಿ ಬ್ಯಾಂಕ್ ಉದ್ಯೋಗಿ ತ್ರಿವೇಣಿ(34) ಸ್ಥಳದಲ್ಲೇ ಮೃತಪಟ್ಟಿದ್ದರು. ಈಕೆ ಪತಿ ಬ್ಯಾಂಕ್ ನೌಕರ ವಿನೋದ(31) ತೀವ್ರ ಗಾಯಗೊಂಡು ಇನ್ನೂ ಪ್ರಜ್ಞಾಹೀನ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಗಂಗಾವತಿ ಡಿವೈಎಸ್ಪಿ ಆರ್.ಎಸ್ ಉಜ್ಜಿನಕೊಪ್ಪ ಅವರ ನೇತೃತ್ವದಲ್ಲಿ ತನಿಖೆ ಕೈಗೊಂಡಿದ್ದ ಸಿಪಿಐ ಉದಯರವಿ, ಪಿಎಸ್ಐಗಳಾದ ಅವಿನಾಶ ಕಾಂಬ್ಲೆ, ಪ್ರಶಾಂತ, ಕಾರಟಗಿ ಠಾಣೆ ಸಿಬ್ಬಂದಿ ಭೀಮಣ್ಣ , ಮಾರುತಿ, ಅಮರಪ್ಪ , ಮಂಜು ಸಿಂಗ್, ಶರಣಪ್ಪ, ಶಿವರಾಜ, ಪ್ರಸನ್ನ ಕುಮಾರ, ಬಸವರಾಜ, ನಾಗರಾಜ, ಕನಕಗಿರಿ ಠಾಣೆಯ ಶೇಖರ, ಕೊಟ್ರೇಶ, ಬೈಲಪ್ಪ, ಅರ್ಜುನ ಅವರಿಗೆ ಕೊಪ್ಪಳ ಎಸ್ಪಿ ಟಿ.ಶ್ರೀಧರ ಶ್ಲಾಘಿಸಿ ಬಹುಮಾನ ಘೋಷಿಸಿ ಪ್ರಶಂಸೆ ಪತ್ರ ನೀಡಿದರು.

0
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 445
error: Content is protected !!