ಹಾಲಿ-ಮಾಜಿ‌ ಶಾಸಕರ‌ ಪ್ರತಿಷ್ಠೆಗೆ ವೇದಿಕೆ ಆಯ್ತಾ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ?

ಈ ಸುದ್ದಿ ಹಂಚಿಕೊಳ್ಳಿ:

ವಿಜಯಪರ್ವ ಸುದ್ದಿ, ಗಂಗಾವತಿ
ಗಂಗಾವತಿ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ ನವೆಂಬರ್ 2ಕ್ಕೆ ನಿಗದಿಯಾಗಿದೆ.‌ ಚುನಾವಣೆ ದಿನ ನಿಗದಿಯಾದ ದಿನದಿಂದ ‌ದಿನಕ್ಕೊಂದು ಹೈಡ್ರಾಮಾ ನಡೆಯುತ್ತಿದ್ದು, ಹಾಲಿ- ಮಾಜಿ ಶಾಸಕರ ಪ್ರತಿಷ್ಠೆಗೆ ಚುನಾವಣೆ ವೇದಿಕೆಯಾಗಿದೆ.

ಈಗಾಗಲೇ ಅಧ್ಯಕ್ಷ ಸ್ಥಾನದ ಮೀಸಲಾತಿ ಬದಲಾವಣೆ ಮಾಡಿಸಿರೋ ಶಾಸಕ ಪರಣ್ಣ ಮುನವಳ್ಳಿ ನಗರಸಭೆಯಲ್ಲಿ ಅಧಿಕಾರ ಹಿಡಿಯಲು‌ ಶತ‌ ಪ್ರಯತ್ನ ಮಾಡುತ್ತಿದ್ದಾರೆ. ಇತ್ತ ಬಿಜೆಪಿಯಿಂದ ಹೊರ ಬಂದಿರೋ ಮುಖಂಡ ಸೈಯದ್ ಅಲಿ, ಶಾಸಕ ಪರಣ್ಣ ಮುನವಳ್ಳಿ ಅವರಿಗೆ ಮುಖಭಂಗ ಮಾಡುಲು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಪಾಳೆಯದಲ್ಲಿ‌ ನಿಂತು ಗೇಮ್ ಪ್ಲೇ ಮಾಡುತ್ತಿದ್ದಾರೆ.‌

ಬಲಾಬಲ: ಗಂಗಾವತಿ ನಗರಸಭೆ ಅಧ್ಯಕ್ಷ ಸ್ಥಾನ ಒಬಿಸಿ2 ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಒಟ್ಟು 35 ಸದಸ್ಯ ಬಲದ ಗಂಗಾವತಿ ನಗರಸಭೆಯಲ್ಲಿ ಕಾಂಗ್ರೆಸ್ ನ 17, ಬಿಜೆಪಿಯ 14, ಜೆಡಿಎಸ್(ಎಚ್.ಆರ್.ಶ್ರೀನಾಥ ಬೆಂಬಲಿಗರು)- 2 ಮತ್ತು ಪಕ್ಷೇತರ 2 ಸದಸ್ಯರಿದ್ದಾರೆ.‌ಇನ್ನು ಈ ಚುನಾವಣೆಯಲ್ಲಿ ಶಾಸಕ- ಸಂಸದರೂ ಓಟ್ ಮಾಡಬಹುದು. ಇದರಿಂದ ಬಹುಮತದ‌ ಮ್ಯಾಜಿಕ್ ನಂಬರ್ 19 ಆಗಿದ್ದು, ಕಾಂಗ್ರೆಸ್- ಬಿಜೆಪಿಗೆ ಸ್ಪಷ್ಟ ಬಹುಮತ ಇಲ್ಲ. ಈ ಕಾರಣಕ್ಕೆ ಅಧಿಕಾರ ಹಿಡಿಯಲು ದಿನಕ್ಕೊಂದು ಹೈಡ್ರಾಮಾ ನಡೆಯುತ್ತಿವೆ.

ಬಿಜೆಪಿ ಲೆಕ್ಕಾಚಾರ ಏನು?: ತನ್ನ 14, ಇಬ್ಬರು ಪಕ್ಷೇತರ ಮತ್ತು ಇಬ್ಬರು ಜೆಡಿಎಸ್ ಸದಸ್ಯರನ್ನು ಒಳಗೊಂಡು ಶಾಸಕ- ಸಂಸದರ ಓಟ್ ಪಡೆಯಬೇಕು. ಈ ಮೂಲಕ ಸರಳವಾಗಿ ಅಧಿಕಾರ ಹಿಡಿಯಬಹುದು ಎಂಬುದು ಬಿಜೆಪಿ ಲೆಕ್ಕಾಚಾರ ಆಗಿತ್ತು. ಆದರೆ, ಚುನಾವಣೆ ದಿನಾಂಕ‌ ನಿಗದಿಯಾದ ಕೆಲ ದಿನಕ್ಕೆ ಬಿಜೆಪಿ ಲೆಕ್ಕಚಾರ ತಲೆ ಕೆಳಗಾಗಿದೆ.‌

ಸುಧಾ ಸೋಮನಾಥ

ನಗರಸಭೆ ಚುನಾವಣೆ ವೇಳೆ ಶಾಸಕ ಇಲ್ಬಾಲ್ ಅನ್ಸಾರಿಯಿಂದ ದೂರವಾಗಿ, ಶ್ರೀನಾಥ ಅವರ ಜೊತೆ ‌ಗುರುತಿಸಿಕೊಂಡು ಸ್ಪರ್ಧೆ ಮಾಡಿದ್ದ ಜೆಡಿಎಸ್ ಸದಸ್ಯ ಜಬ್ಬರ್ ಬಿಚ್ಚುಗತ್ತಿ ‘ಕೈ’ ಪಾಳೆಯಕ್ಕೆ ಜೈ ಎಂದಿದ್ದಾನೆ. ಇದರಿಂದ ಕಾಂಗ್ರೆಸ್ ಬಲ 18ಕ್ಕೆ ಏರಿಕೆ ಆಗಿದೆ. ಈ ನಡುವೆ ಸ್ವತಃ ಬಿಜೆಪಿ ಚಿನ್ಹೆ‌ ಅಡಿ ಆಯ್ಕೆ ಆಗಿರೋ 22ನೇ ವಾರ್ಡ್ ಸದಸ್ಯೆ ಸುಧಾ ಸೋಮನಾಥ ಬಿಜೆಪಿಗೆ ‘ಕೈ’ ಕೊಟ್ಟು, ಪ್ರವಾಸಕ್ಕೆ ಹೋಗಿದ್ದಾರೆ.‌ಇದು ಶಾಸಕ ಪರಣ್ಣ ಮುನವಳ್ಳಿ ಮತ್ತು ಬಿಜೆಪಿಗೆ ಮಾಸ್ಟರ್ ‌ಸ್ಟ್ರೋಕ್ ಹೊಡೆದಂತಾಗಿದೆ.‌ ಈ ಅನಿರೀಕ್ಷಿತ ಬೆಳವಣಿಗೆ ದಿನಕ್ಕೊಂದು ಹೈಡ್ರಾಮಾಕ್ಕೆ ವೇದಿಕೆ ಆಗಿದೆ.

ಕಾಂಗ್ರೆಸ್ ಲೆಕ್ಕಾಚಾರ?: ಬಹುಮತದ ಮ್ಯಾಜಿಕ್ ನಂಬರ್ 19 ಆಗಿದೆ.‌ ಕಾಂಗ್ರೆಸ್ ತನ್ನ 17 ಸದಸ್ಯರ ಜೊತೆಗೆ ಒಬ್ಬ ಜೆಡಿಎಸ್ ಸದಸ್ಯನನ್ನು ಸೆಳೆದಿದೆ. ಈ ಮೂಲಕ 18 ಸದಸ್ಯ ಬಲ ಹೊಂದಿದೆ. ಮತ್ತೊಂದೆಡೆ ಬಿಜೆಪಿಗೆ ಮಾಸ್ಟರ್ ಸ್ಟ್ರೋಕ್ ನೀಡಿರೋ‌ ಸದಸ್ಯೆ ಸುಧಾ‌ ಸೋಮನಾಥನನ್ನು ಚುನಾವಣೆ ಸಭೆಗೆ ಗೈರು ಮಾಡಿಸಬೇಕು. ಜೊತೆಗೆ‌ ಒಂದೆರಡು ಬಿಜೆಪಿ ಅಥವಾ ಪಕ್ಷೇತರ ಸದಸ್ಯರನ್ನು ತಮ್ಮತ್ತ ಸೆಳೆದು ಅಧಿಕಾರ ಹಿಡಿಯಬೇಕು ಎಂಬುದು ‘ಕೈ’ ನಾಯಕರ ಲೆಕ್ಕಾಚಾರ. ಇದು ಶಾಸಕ ಪರಣ್ಣ ಮುನವಳ್ಳಿ ಮತ್ತು ಬಸವರಾಜ ದಡೆಸುಗೂರ ಅವರ ನಿದ್ದೆಗೆಡಿಸಿದೆ.

ಹೈಡ್ರಾಮಾ: ಬಿಜೆಪಿ ಸದಸ್ಯೆ‌ ಸುಧಾ‌ ಸೋಮನಾಥ ಹೊರ ಬಂದು, ಪ್ರವಾಸಕ್ಕೆ ಹೋಗಿದ್ದರಿಂದ ಬಿಜೆಪಿ ನಾಯಕರು, ಅವರ ಕುಟುಂಬದಿಂದ ಕಿಡ್ನಾಪ್ ಪ್ರಕರಣ ದಾಖಲಿಸಿದ್ದಾರೆ. ಬೆನ್ನಲ್ಲೆ ಸುಧಾ ಸೋಮನಾಥ ನಮ್ಮನ್ನು ಯಾರೂ ಅಪಹರಿಸಿಲ್ಲ ಅಂತಾ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಈ ನಡುವೆ ಕಾಂಗ್ರೆಸ್ ಸದಸ್ಯರು ತಮಗೆ ಗಂಗಾವತಿ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಅಂತಾ ಕೊಪ್ಪಳ ಎಸ್ಪಿ ಅವರಿಗೆ ಮನವಿ ಸಲ್ಲಿಸಲು ಮುಂದಾಗಿದ್ದರು.‌ ಅದ್ಯಾಕೋ ಮತ್ತೇ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. 
0
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 664
error: Content is protected !!