ಡಿಸಿ ಆದೇಶಕ್ಕಿಲ್ಲ ಕಿಮ್ಮತ್ತು, ಭತ್ತ ಕಟಾವು ಯಂತ್ರದ ಮಾಲೀಕರ ದೌಲತ್ತು! ರೈತ ಮುಖಂಡರ ಆಕ್ರೋಶ

ಈ ಸುದ್ದಿ ಹಂಚಿಕೊಳ್ಳಿ:

ವಿಜಯಪರ್ವ ಸುದ್ದಿ, ಕಾರಟಗಿ
ಭತ್ತ ಕಟಾವು ಯಂತ್ರದ ದರ ಪ್ರತಿ ಗಂಟೆಗೆ 1800 ರೂಪಾಯಿ ನಿಗದಿಗೆ ಆಗ್ರಹಿಸಿ ಭಾರತೀಯ ಕೃಷಿ ಕಾರ್ಮಿಕ ಮತ್ತು ರೈತ ಸಂಘಟನೆಯಿಂದ ಕಾರಟಗಿ ತಹಸೀಲ್ದಾರ್ ಗೆ ಮನವಿ ಸಲ್ಲಿಸಲಾಯಿತು.

ಸಂಘಟನೆ ಜಿಲ್ಲಾಧ್ಯಕ್ಷ ಶರಣಪ್ಪ ಕೊತ್ವಾಲ್ ಮಾತನಾಡಿ, ದರ ಕುಸಿತದಿಂದ ಕಂಗಾಲಾಗಿರುವ ಭತ್ತ ಬೆಳೆಗಾರರಿಗೆ ಕಟಾವು ಯಂತ್ರದ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.‌ ಇದರಿಂದ ರೈತರು ಕಂಗಾಲಾಗಿದ್ದಾರೆ. ಈಗಾಗಲೇ ಕೊಪ್ಪಳ ಜಿಲ್ಲಾಧಿಕಾರಿಗಳು ಪ್ರತಿ ಗಂಟೆಗೆ 1900 ರೂ.‌ದರ ಕಡ್ಡಾಯ ಎಂದು ಆದೇಶಿಸಿದ್ದಾರೆ.‌ ಆದಾಗ್ಯೂ ಭತ್ತ ಕಟಾವು ಯಂತ್ರದ ಮಾಲೀಕರು ತಮಗೆ ಇಷ್ಟ ಬಂದಷ್ಟು ದರ ನಿಗದಿ ಮಾಡಿದ್ದಾರೆ ಎಂದು ತಿಳಿಸಿದರು.

ಡಿಸಿ ಆದೇಶ ಪ್ರತಿ

ಪ್ರತಿ ಗಂಟೆಗೆ ಕನಿಷ್ಠ ‌2500 ರೂ.ಯಿಂದ 3500 ರೂ.ವರೆಗೆ ದರ ನಿಗದಿ ಮಾಡುತ್ತಿದ್ದಾರೆ. ರೈತರ ಅನಿವಾರ್ಯತೆಯನ್ನೇ ಬಂಡವಾಳ ಮಾಡಿಕೊಂಡು ಇದಕ್ಕಿಂತ ಹೆಚ್ಚು ದರಕ್ಕೂ ಭತ್ತ ಕಟಾವು ಮಾಡುವ ಯಂತ್ರದ ಮಾಲೀಕರು ‌ಇದ್ದಾರೆ ಎಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಧಿಕಾರಿಗಳ ಆದೇಶ ಕೂಡಲೇ ಅನುಷ್ಠಾನ ಮಾಡಬೇಕು ಎಂದು ಆಗ್ರಹಿಸಿದರು.

ಈ ಮೊದಲು ತಹಸೀಲ್ದಾರ್ ಕಚೇರಿ ಮುಂದೆ ಜಮಾಯಿಸಿದ್ದ ಕಾರ್ಯಕರ್ತರು ಭತ್ತ ಕಟಾವು ಯಂತ್ರದ ಮಾಲೀಕರ ‌ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಹಸೀಲ್ದಾರ್ ಅವರನ್ನೂ ತರಾಟೆಗೆ ತೆಗೆದುಕೊಂಡ ಹೋರಾಟಗಾರರು ಜಿಲ್ಲಾಧಿಕಾರಿಗಳ ಆದೇಶ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಸಂಘಟನೆ ಕಾರ್ಯದರ್ಶಿ ಎಸ್.ಎ.ಖಾದ್ರಿ, ಗ್ರಾಮ ಘಟಕದ ಅಧ್ಯಕ್ಷ ಹಸನ್ ಸಾಬ್, ಸದಸ್ಯರಾದ ಶರಣಪ್ಪ ಮೇಟಿಗೌಡರ, ಯಮನೂರ ನಾಯಕ, ವೀರೇಶ ಚಳ್ಳೂರ, ಲಕ್ಷ್ಮಣ ನಾಯಕ, ಚಂದ್ರಶೇಖರ ಬಾದನಟ್ಟಿ,‌ ತಿಪ್ಪೇಸ್ವಾಮಿ ತಾಳೂರು, ಗುಂಡಪ್ಪ ಯರಡೋಣ ಸೇರಿ ಇತರರು ಇದ್ದರು.

3+
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 770
error: Content is protected !!