ಕಾಡಾ ಅಧ್ಯಕ್ಷ ಸ್ಥಾನಕ್ಕೆ ಹೆಚ್ಚಿದ ಪೈಪೋಟಿ; 3 ಜಿಲ್ಲೆ ಬಿಜೆಪಿ ಮುಖಂಡರ ಜಾತಿ ಲೆಕ್ಕಾಚಾರ, ಲಾಭಿ!

ಈ ಸುದ್ದಿ ಹಂಚಿಕೊಳ್ಳಿ:

ವಿಜಯಪರ್ವ ಸುದ್ದಿ, ಕೊಪ್ಪಳ
ಬಸನಗೌಡ ತುರವಿಹಾರ ಕಾಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರಿದ ಬೆನ್ನಲ್ಲೆ 3 ಜಿಲ್ಲೆಯ ಬಿಜೆಪಿ ಮುಖಂಡರು ತೆರವಾದ ಅಧಿಕಾರ ಹಿಡಿಯಲು ಪೈಪೋಟಿ ಆರಂಭಿಸಿದ್ದಾರೆ.

ಪ್ರತಾಪಗೌಡ ಪಾಟೀಲ್ ಗೆ ಬಿಜೆಪಿ ಟಿಕೇಟ್ ಪಕ್ಕಾ ಎಂಬುದನ್ನು ಅರಿತ ಮಸ್ಕಿ ವಿಧಾನಸಭೆ ಕ್ಷೇತ್ರದ ಪರಾಜಿತ ಅಭ್ಯರ್ಥಿ ಬಸನಗೌಡ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಆಗೋದು ಬಹುತೇಕ ಖಚಿತವಾಗಿದೆ.
ಬೆನ್ನಲ್ಲೆ ಕೊಪ್ಪಳ-ರಾಯಚೂರು-ಬಳ್ಳಾರಿ ಜಿಲ್ಲೆಯ ಬಿಜೆಪಿ ವಲಯದಲ್ಲಿ, ಮುನಿರಾಬಾದ್ ತುಂಗಭದ್ರಾ ಯೋಜನೆಯ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ(ಕಾಡಾ-CADA)ದ ಅಧ್ಯಕ್ಷ ಸ್ಥಾನ ಯಾರಿಗೆ? ಎಂಬ ಚರ್ಚೆ ಆರಂಭವಾಗಿದೆ. ಕೊಪ್ಪಳ ಜಿಲ್ಲೆಯ ಕಾರಟಗಿ ಮತ್ತು ಗಂಗಾವತಿ ತಾಲೂಕಿನಲ್ಲಂತೂ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಿದೆ.

ಕಳೆದ‌ ಸುಮಾರು 7 ವರ್ಷದ ಹಿಂದೆ ‌ಗಿರೇಗೌಡ ಅವರು ಕಾಡಾ ಅಧ್ಯಕ್ಷರಾಗಿದ್ದರು. ನಂತರ ಕೊಪ್ಪಳ ಜಿಲ್ಲೆಗೆ ಕಾಡಾ ಅಧ್ಯಕ್ಷ ಸ್ಥಾನ ಒಲಿದು ಬಂದಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿ ಕೊಪ್ಪಳ ಜಿಲ್ಲೆಗೆ ಸ್ಥಾನ ನೀಡಬೇಕು ಎಂಬ ಮಾತು ಕೇಳಿ ಬಂದಿದೆ. ಈ ಕಾರಣಕ್ಕೆ ಕೊಪ್ಪಳ ಜಿಲ್ಲೆಯಲ್ಲಿ ಆಕಾಂಕ್ಷಿಗಳ ಪಟ್ಟಿ ಸಹಜವಾಗಿಯೇ ಹೆಚ್ಚಾಗಿದೆ.

ಕುರ್ಚಿ ಮೇಲೆ ಕಣ್ಣಿಟ್ಟಿರುವ‌ ಬಿಜೆಪಿಯ 2ನೇ ಹಂತದ ನಾಯಕರು ನೇರವಾಗಿ ತಮ್ಮ ಮನಸ್ಸಿನ ಆಸೆಯನ್ನು ಹೈಕಮಾಂಡ್ ಮುಂದೆ ಹೇಳಿಕೊಳ್ಳುತ್ತಿಲ್ಲ. ಬದಲಾಗಿ ತಮ್ಮ ಬೆಂಬಲಿಗರಿಂದ ಫೇಸ್ ಬುಕ್ ಮತ್ತು ವಾಟ್ಸಾಪ್ ನಂತಹ ಸಾಮಾಜಿಕ ಜಾಲತಾಣದಲ್ಲಿ ಬೇಡಿಕೆ ಮುಂದಿಡುತ್ತಿದ್ದಾರೆ. ಕೆಲ ಮುಖಂಡರು ಜಾತಿ ಲೆಕ್ಕಾಚಾರ, ಹಲವರು ಪಕ್ಷಕ್ಕೆ ಸೇವೆ ಸಲ್ಲಿಸಿದ ಮಾನದಂಡದ ಮೇಲೆ ಹುದ್ದೆ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ.

ಕೊಪ್ಪಳ ಜಿಲ್ಲೆಯ ಮಾಜಿ ಮಂತ್ರಿ ನಾಗಪ್ಪ ಸಾಲೋಣಿ, ಬಿಜೆಪಿ ‌ಮುಖಂಡರಾದ ತಿಪ್ಪೇರುದ್ರಸ್ವಾಮಿ, ನಾಗರಾಜ ಬಿಲ್ಗಾರ್, ಚನ್ನಬಸವ ಸುಂಕದ, ವಿರೂಪಾಕ್ಷಪ್ಪ‌ ಸಿಂಗನಾಳ, ಯರಕಲ್ ಗುರುಸಿದ್ದಪ್ಪ ಸೇರಿ ಸುಮಾರು 10 ಮುಖಂಡರ ಹೆಸರುಗಳು ಕೇಳಿಬರುತ್ತಿವೆ. ಈ ಎಲ್ಲ ಮುಖಂಡರ ಬೆಂಬಲಿಗರು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಕಾಡಾ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ತಮ್ಮದೇ ಆದ ರಾಜಕೀಯ ಹಿನ್ನೆಲೆ ಮತ್ತು ಜಾತಿ ಬಲದ ಆಧಾರದಲ್ಲಿ ಹೈಕಮಾಂಡ್ ಮೇಲೆ ಒತ್ತಡ ಹಾಕುವ ಕೆಲಸ ಮಾಡುತಿದ್ದಾರೆ. ಆದರೆ, ಕನಕಗಿರಿ- ಗಂಗಾವತಿ ಶಾಸಕರು ಮತ್ತು ಕೊಪ್ಪಳ ಸಂಸದರು ಯಾರಿಗೆ ಶಿಫಾರಸ್ಸು ಮಾಡ್ತಾರೆ, ಕಾಡಾ ಅಧ್ಯಕ್ಷ ಸ್ಥಾನದ ಅಧಿಕಾರ ಯಾರಿಗೆ ಸಿಗುತ್ತೋ ಕಾದು ನೋಡಬೆಕಿದೆ.

1+
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 1264
error: Content is protected !!