ಗ್ರಾಮ ಪಂಚಾಯತ್ ಚುನಾವಣೆಗೆ 3 ವಾರದಲ್ಲಿ ವೇಳಾಪಟ್ಟಿ ಪ್ರಕಟಿಸುವಂತೆ ಹೈಕೋರ್ಟ್ ಸೂಚನೆ

ಈ ಸುದ್ದಿ ಹಂಚಿಕೊಳ್ಳಿ:

ವಿಜಯಪರ್ವ ಸುದ್ದಿ, ಬೆಂಗಳೂರು
ಗ್ರಾಮ ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಮುಂದಿನ 3 ವಾರದ ಒಳಗಾಗಿ ವೇಳಾಪಟ್ಟಿ ಪ್ರಕಟಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.

ಅವಧಿ ಮುಗಿದ ಗ್ರಾಮ ಪಂಚಾಯತ್ ಗಳಿಗೆ ಚುನಾವಣೆ ನಡೆಸಲು ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಕೆ.ಸಿ ಕೊಂಡಯ್ಯ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ನಡುವೆ ಸರ್ಕಾರ ಚುನಾವಣೆ ಆಯೋಗಕ್ಕೆ ಪತ್ರ ಬರೆದು ರಾಜ್ಯದಲ್ಲಿ ಕೋವಿಡ್19 ‌ಹರಡುತ್ತಿರುವ ಹಿನ್ನೆಲೆ, ಅನಿರ್ಧಿಷ್ಟ ಅವಧಿಗೆ ಗ್ರಾಮ ಪಂಚಾಯತ್ ‌ಚುನಾವಣೆ ಮುಂದೂಡುವಂತೆ ಕೇಳಿಕೊಂಡಿತ್ತು.

ಸುದೀರ್ಘ ವಿಚಾರಣೆ ನಡೆಸಿದ್ದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಅಕ್ಟೋಬರ್ 23ಕ್ಕೆ ವಿಚಾರಣೆ ಮುಗಿಸಿ, ತೀರ್ಪು ಕಾಯ್ದಿರಿಸಿತ್ತು. ರಾಜ್ಯದಲ್ಲಿ ಬಾಕಿಯಿರುವ 5800 ಗ್ರಾಮ ಪಂಚಾಯತ್ ಗಳ ಚುನಾವಣೆಯನ್ನು ನಡೆಸಬೇಕು. ಮೂರು ವಾರಗಳಲ್ಲಿ ವೇಳಾಪಟ್ಟಿ ಪ್ರಕಟಿಸಬೇಕು ಎಂದು ಹೈಕೋರ್ಟ್ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.

ಚುನಾವಣಾ ಪ್ರಕ್ರಿಯೆಯಲ್ಲಿ ಸರ್ಕಾರದ ಪಾತ್ರವಿಲ್ಲ ಎಂದು ಸ್ಪಷ್ಟವಾಗಿ ಹೇಳಿರುವ ಹೈಕೋರ್ಟ್, ಚುನಾವಣಾ ಕಾರ್ಯಕ್ಕೆ ಸಿಬ್ಬಂದಿ ಅವಶ್ಯಕತೆ ಇದ್ದರೆ ರಾಜ್ಯಪಾಲರಿಗೆ ಮನವಿ ಸಲ್ಲಿಸುವಂತೆ ಆಯೋಗಕ್ಕೆ ಸೂಚಿಸಿದೆ.

0
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 236
error: Content is protected !!