ಎರಡನೇ ಬೆಳೆಗೆ ಷರತ್ತಿನೊಂದಿಗೆ ನೀರು ಬಿಡಲು ಐಸಿಸಿ ಸಭೆ ತೀರ್ಮಾನ; ಏನದು ಷರತ್ತು?

ವಿಜಯಪರ್ವ ಸುದ್ದಿ, ಕೊಪ್ಪಳ
ತುಂಗಭದ್ರ ಡ್ಯಾಂ ಅಚ್ಚುಕಟ್ಟು ವ್ಯಾಪ್ತಿಯ ರೈತರಿಗೆ 2ನೇ ಬೆಳೆಗೆ ನೀರು ಸಿಗೋದು ಪಕ್ಕಾ ಆಗಿದೆ. ಆದಾಗ್ಯೂ ನೀರಿನ ಕೊರತೆ ಇದ್ದು, ರೈತರು ಮಿತವಾಗಿ ನೀರು ಬಳಕೆ ಮಾಡಬೇಕು. ಭತ್ತ, ಕಬ್ಬಿನ ಹೊರತಾಗಿ ಬೇರೆ ಬೆಳೆ ಬೆಳೆಯಬೇಕು ಎಂದು ಸಭೆ ಅಧ್ಯಕ್ಷತೆ ವಹಿಸಿದ್ದ ಅರಣ್ಯ ಹಾಗೂ ಬಳ್ಳಾರಿ ಉಸ್ತುವಾರಿ ಮಂತ್ರಿ ಆನಂದ್ ಸಿಂಗ್ ರೈತರಿಗೆ ಮನವಿ ಮಾಡಿದರು.
ಕೊಪ್ಪಳ ಜಿಲ್ಲೆ ಮುನಿರಾಬಾದ್ ನಲ್ಲಿನ ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ(Cada) ಕಚೇರಿಯಲ್ಲಿ ಶನಿವಾರ ನಡೆದ ನೀರಾವರಿ ಸಲಹಾ ಸಮಿತಿ ಸಭೆ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಅಚ್ಚುಕಟ್ಟು ರೈತರ ನಿರೀಕ್ಷೆಯಂತೆ ಎರಡನೇ ಬೆಳೆಗಾಗಿ ಡಿಸೆಂಬರ್ 1 ರಿಂದಲೇ ಮಾರ್ಚ್ 31ರ ವರೆಗೆ ಕಾಲುವೆಗೆ ನೀರು ಹರಿಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಡಿ.1 ರಿಂದ ಮುಂದಿನ 20 ದಿನ ಎಡದಂಡೆ ಕಾಲುವೆಗೆ 2400 ಕ್ಯೂಸೆಕ್ ಮತ್ತು ಡಿ. 21 ರಿಂದ ಮುಂದಿನ 101 ದಿನ 3300 ಕ್ಯೂಸೆಕ್ ನೀರು ಕಾಲುವೆಗೆ ಹರಿಸಲಾಗುವುದು ಎಂದರು.
ಡ್ಯಾಂನಲ್ಲಿ ಸುಮಾರು 90 ಟಿಎಂಸಿ ನೀರಿದೆ. ಈ ಪೈಕಿ ಕೇವಲ 51 ಟಿಎಂಸಿ ನೀರು ಕರ್ನಾಟಕದ ಪಾಲಿಗೆ ಸಿಗಲಿದೆ. ಆದರೆ, ಎರಡನೇ ಬೆಳೆ ಬೆಳೆಯಲು ಕರ್ನಾಟಕದ ಎಡದಂತೆ- ಬಲದಂಡೆ ಹಾಗೂ ವಿಜಯನಗರ ಹಾಗೂ ರಾಯ-ಬಸವ ಕಾಲುವೆಗೆ 61 ಟಿಎಂಸಿ ನೀರು ಬೇಕಿದ್ದು, 10 ಟಿಎಂಸಿ ನೀರಿನ ಕೊರತೆ ಇದೆ. ಆದಾಗ್ಯೂ ಎರಡನೇ ಬೆಳೆಗೆ ಯಾವುದೇ ತೊಂದರೆ ಆಗದಂತೆ ನೀರು ಪೂರೈಸುವ ಕೆಲಸ ಮಾಡಲಾಗುವುದು ಎಂದರು.
ಕೊಪ್ಪಳ ಜಿಲ್ಲಾ ಉಸ್ತುವಾರಿ ಮಂತ್ರಿ ಬಿ.ಸಿ.ಪಾಟೀಲ್ ಮಾತನಾಡಿ, ಟೆಲೆಂಡ್ ರೈತರ ನಿಂತ ಬೆಳೆಗೆ ನೀರು ನೀಡುವ ಉದ್ದೇಶದಿಂದ ನವೆಂಬರ್ 21 ಎಂದರೆ ಇಂದಿನಿಂದ ಡಿಸೆಂಬರ್ 1ರ ವರೆಗೆ 2400 ಕ್ಯೂಸೆಕ್ ನೀರು ಬಿಡಲು ಸಭೆ ತೀರ್ಮಾನಿಸಿದೆ. ಉಳಿದಂತೆ ರಾಯಚೂರು ಪಟ್ಟಣದ ಕುಡಿವ ನೀರಿಗಾಗಿ ನೀರು ನೀಡಬೇಕಿದ್ದರಿಂದ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇದೆ.ಇದರಿಂದ ಅಚ್ಚುಕಟ್ಟು ವ್ಯಾಪ್ತಿಯ ರೈತರು ಭತ್ತ ಮತ್ತು ಕಬ್ಬು ಬೆಳೆ ಬಿಟ್ಟು, ಮಿತ ನೀರು ಬಳಕೆ ಮಾಡುವ ಬೆಳೆ ಬೆಳೆಯುವಂತೆ ಕೃಷಿ ಮಂತ್ರಿ ಬಿ.ಸಿ.ಪಾಟೀಲ್ ಮನವಿ ಮಾಡಿದರು.
ತುಂಗಭದ್ರಾ ಡ್ಯಾಂನ 114ನೇ ಸಲಹಾ ಸಮಿತಿ ಸಭೆಯೂ ಈ ಹಿಂದಿನ ಸಭೆಯಂತೆ ಕೂಗಾಟ, ಹಾರಾಟಕ್ಕೆ ಸಾಕ್ಷಿ ಆಯಿತು. ಸಂಸದರಾದ ಸಂಗಣ್ಣ ಕರಡಿ, ವೈ.ದೇವೆಂದ್ರಪ್ಪ, ಶಾಕರಾದ ಪರಣ್ಣ ಮುನವಳ್ಲಿ, ಬಸವರಾಜ ದಡೆಸುಗೂರ, ರಾಘವೇಂದ್ರ ಹಿಟ್ನಾಳ, ಜೆ.ಎನ್.ಗಣೇಶ, ಸೋಮಲಿಂಗಪ್ಪ ಸೇರಿ ಇತರರು ಇದ್ದರು.