ಕೃಷಿ ಮಂತ್ರಿ ಬಿ.ಸಿ.ಪಾಟೀಲ್ 10 ವರ್ಷದಿಂದ ಚುನಾವಣೆ ನೋಡ್ತಿದ್ದಾರೆ; ರಾಜಕೀಯ ಅನುಭವದ ಬಗ್ಗೆ ಮಾಜಿ ಮಂತ್ರಿ ವ್ಯಂಗ್ಯ

ಈ ಸುದ್ದಿ ಹಂಚಿಕೊಳ್ಳಿ:

ವಿಜಯಪರ್ವ ಸುದ್ದಿ, ಕೊಪ್ಪಳ
ಕೃಷಿ ಮಂತ್ರಿ ಬಿ.ಸಿ. ಪಾಟೀಲ್ ಕೇವಲ ‌10 ವರ್ಷದಿಂದ ಚುನಾವಣೆ, ‌ರಾಜಕಾರಣ ನೋಡಿರಬಹುದು. ಆದರೆ, ನಾನು ನನ್ನ 19ನೇ ವಯಸ್ಸಿನ ಕಾಲೇಜು ಜೀವನದಿಂದ ರಾಜಕಾರಣ ಮಾಡುತ್ತಿದ್ದೇನೆ ಎಂದು ಮಾಜಿ ಮಂತ್ರಿ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಹೇಳಿದರು.

ಕೊಪ್ಪಳದಲ್ಲಿ ವಿದ್ಯುತ್‌ ‌ದರ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ನಂತರ ಭಾನುವಾರ ಮಾತನಾಡಿ, ಇವಿಎಂ ನಿಂದ ಬಿಜೆಪಿ ಚುನಾವಣೆ ಗೆಲ್ಲುತ್ತಿದೆ ಎಂಬ ಶಿವರಾಜ ತಂಗಡಗಿ ಹೇಳಿಕೆಗೆ ಕೃಷಿ ಮಂತ್ರಿ ಬಿ.ಸಿ.ಪಾಟೀಲ್ ‘ತಂಗಡಗಿ ಹೇಳಿಕೆ ಕುಣಿಯಲು ಬಾರಾದನೆ ನೆಲ ಡೊಂಕು’ ಎನ್ನುವಂತಿದೆ ಎಂಬ ಹೇಳಿಕೆಗೆ ತಂಗಡಗಿ ತಿರುಗೇಟು ನೀಡಿದ್ದಾರೆ.

ನಾನು ವಿದ್ಯಾರ್ಥಿ ವಯಸ್ಸಿನಲ್ಲೇ ಕ್ಯಾಪಸ್ ನಲ್ಲಿ ಚುನಾವಣೆ ಮಾಡಿದ್ದೇನೆ.‌ ಆಗಿನಿಂದಲೂ ನನಗೆ ರಾಜಕೀಯ ಗೊತ್ತು. ಬಿ.ಸಿ. ಪಾಟೀಲ್ ಉಪ ಚುನಾವಣೆಯಲ್ಲಿ ಗೆದ್ದಿದ್ದು ಕೂಡ ಇವಿಎಂ ಗೋಲ್ ಮಾಲ್ ನಿಂದ ಎಂಬುದು ಸ್ಪಷ್ಟ ಎಂದು ಗೇಲಿ ಮಾಡಿದರು.

ಶಿರಾದಲ್ಲಿ ಕಾಂಗ್ರೆಸ್ ಪರ ಅಲೆ ಇತ್ತು. ಆದರೆ, ಅವರು ಹೇಳಿದಷ್ಟು ವೋಟ್ ನಿಂದ ಬಿಜೆಪಿ ಅಭ್ಯರ್ಥಿ ಆಯ್ಕೆ ಆಗಿದ್ದಾರೆ. ಬಿಜೆಪಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ಮಾಡಿದ್ರೆ ಕಾಂಗ್ರೆಸ್ ಗೆಲ್ಲುತ್ತೆ. ಆಗಲೂ ಬಿಜೆಪಿ ಗೆದ್ದರೆ ನಾವು ಶರಣಾಗುತ್ತೇವೆ. ಇವಿಎಂ ಬಗ್ಗೆ ಅನುಮಾನ ಇರೋದ್ರಿಂದ ಕೇಂದ್ರ ಸರ್ಕಾರ ಇವಿಎಂ ಬದಲಾಯಿಸಲಿ ಎಂದರು.

ಜಿಲ್ಲಾ ಉಸ್ತುವಾರಿ ಮಂತ್ರಿ ‌ಬಿ.ಸಿ.ಪಾಟೀಲ್ ಸೂಟ್ ಕೇಸ್ ತಗೊಂಡು ಹೋಗಲು ಕೊಪ್ಪಳಕ್ಕೆ ಬರುತ್ತಾರೆ. ಸಭೆ ನಡೆಸಿ,‌ ಅಧಿಕಾರಿಗಳನ್ನ ಎದುರಿಸುತ್ತಾರೆ. ಸಂಜೆ ಅಧಿಕಾರಿಗಳನ್ನು ಕರೆದು ದುಡ್ಡು‌ ತುಂಬಿಕೊಂಡು ಹೋಗ್ತಾರೆ ಎಂದು ಪುನರ್ ಉಚ್ಚರಿಸಿದರು.

ಕೆಪಿಸಿಸಿ ಅಧ್ಯಕ್ಷರ ಆದೇಶದ ಹಿನ್ನೆಲೆ‌ ವಿದ್ಯುತ್ ದರ ಏರಿಕೆ ‌ವಿರೋಧಿಸಿ‌ ಪ್ರತಿಭಟನೆ ಮಾಡಲಾಗಿದೆ. ಕೆಲ ದಿನದ ನಂತರ ಸ್ಥಳೀಯ ಸಮಸ್ಯೆ ಮುಂದಿಟ್ಟುಕೊಂಡು ಹೋರಾಟ ಮಾಡುತ್ತೇವೆ. ಕೊಪ್ಪಳ ಜಿಲ್ಲೆಯಲ್ಲಿ ಭತ್ತ ಖರೀದಿ ಕೇಂದ್ರ ಆರಂಭಕ್ಕೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತೇವೆ ಎಂದರು. ಶಾಸಕ ರಾಘವೇಂದ್ರ ಹಿಟ್ನಾಳ, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಾಲತಿ ನಾಯಕ, ಶೈಲಜಾ ಹಿರೇಮಠ ಸೇರಿ ಇತರರು ಇದ್ದರು.

+1
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 209
error: Content is protected !!