ಕರ್ನಾಟಕ ಬಂದ್ಗೆ ಮಿಶ್ರ ಪ್ರತಿಕ್ರಿಯೆ; ಪ್ರತಿಭಟನಾಕಾರರ ಬಂಧನ, ಬಿಡುಗಡೆ

ವಿಜಯಪರ್ವ ಸುದ್ದಿ, ಕೊಪ್ಪಳ
ಮರಾಟ ಪ್ರಾಧಿಕಾರ ವಿರೋಧಿಸಿ ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಕೊಪ್ಪಳದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ಬೆಳಗ್ಗೆ 5 ಗಂಟೆಯಿಂದಲೇ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಹೋರಾಟಕ್ಕೆ ಮುಂದಾಗಿದ್ದರು. ಟೈರ್ ಗೆ ಬೆಂಕಿ ಹಚ್ಚಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಪ್ರತಿಕೃತಿ ಸಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಬೆಳಗಿನ ಜಾವ ಹೋರಾಟಗಾರರಿಗಿಂತ ಪೊಲೀಸರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದದ್ದು ಕಂಡು ಬಂತು.
ಆದರೆ, ಬೆಳಗ್ಗೆ 8.30ರ ನಂತರ ಜಿಲ್ಲೆಯ ನಾನಾ ಭಾಗದಿಂದ ಆಗಮಿಸಿದ ವಿವಿಧ ಸಂಘಟನೆ ಕಾರ್ಯಕರ್ತರು ಹೋರಾಟದಲ್ಲಿ ಭಾಗವಹಿಸಿದರು. ಕೇಂದ್ರಿಯ ಬಸ್ ನಿಲ್ದಾಣದ ಮುಂದೆ ಜಮಾಯಿಸಿದ ಸುಮಾರು 25 ಸಂಘಟನೆಗಳ ನೂರಾರು ಕಾರ್ಯಕರ್ತರು ಬಸ್ ಕಾರ್ಯಾಚರಣೆ ಸ್ಥಗಿತ ಮಾಡುವಂತೆ ಆಗ್ರಹಿಸಿದರು. ಇದರಿಂದ ರಾಜ್ಯ ಸಾರಿಗೆ ಸಂಸ್ಥೆ ಬಸ್ ಗಳು ರಸ್ತೆಗೆ ಇಳಿಯಲಿಲ್ಲ. ಇದರಿಂದ ಪ್ರಯಾಣಿಕರು ಪರದಾಡಿದರು.
ಬಂಧನ ಬಿಡುಗಡೆ: ಬಂದ್ ಬೆಂಬಲಿಸಿ ವಿವಿಧ ಕಡೆಯಿಂದ ಜಿಲ್ಲಾ ಕೇಂದ್ರಕ್ಕೆ ಆಗಮಿಸಿದ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ಆರಂಭಿಸಿದರು. ಕೇಂದ್ರಿಯ ಬಸ್ ನಿಲ್ದಾಣದಿಂದ ಮೆರವಣಿಗೆ ಆರಂಭಿಸಿ ಕೊಪ್ಪಳ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದರು.
ಈ ನಡುವೆ ಬಸವೇಶ್ವರ ವೃತ್ತದಲ್ಲಿ ಸಮಾವೇಶಗೊಂಡು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಹೋರಾಟದ ನೇತೃತ್ವ ವಹಿಸಿದ್ದ ಕೆ.ಎಸ್.ಕೊಡತಗೇರಿ, ಸಂಗಮೇಶ ಬಾದವಾಡಗಿ ಮತ್ತು ಶರಣಪ್ಪ ಕೊತ್ವಾಲ್ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದರು. ಈ ವೇಳೆ ಪೊಲೀಸರು ಎರಡು ಡಿಆರ್ ವ್ಯಾನ್ ನಲ್ಲಿ ಪ್ರತಿಭಟನಾಕಾರರನ್ನು ಬಂಧಿಸಿ, ಬಿಡುಗಡೆ ಮಾಡಿದರು.
ಈ ವೇಳೆ ಹೋರಾಟಗಾರರು ಮಾತನಾಡಿ, ರಾಜ್ಯ ಸರ್ಕಾರ ಪೊಲೀಸರ ಮೂಲಕ ದೌರ್ಜನ್ಯ ಮಾಡುತ್ತಿದೆ. ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಂತಿಯುತ ಹೋರಾಟ: ಪ್ರತಿಭಟನಾಕಾರರು ಆಟೋದಲ್ಲಿ ಮೈಕ್ ಇಟ್ಟುಕೊಂಡು ಬಂದ್ ಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಬೆಳಗ್ಗೆ 9 ಗಂಟೆ ವರೆಗೆ ಕೆಲ ಅಂಗಡಿ- ಮುಗ್ಗಟ್ಟು ಅರ್ಧ ತೆರೆದು ವ್ಯಾಪಾರ ವಹಿವಾಟು ನಡೆಸಿದರೆ, ಕೆಲವರು ವ್ಯಾಪಾರ ಬಂದ್ ಮಾಡಿದ್ದರು. ಆದರೆ, ಹೋರಾಟಗಾರರನ್ನು ಬಂಧಿಸಿದ ನಂತರ ಕೊಪ್ಪಳ ಜಿಲ್ಲಾದ್ಯಂತ ವ್ಯಾಪಾರ ವಹಿವಾಟು ಸುಗಮವಾಗಿ ನಡೆದವು.
ಮುಖಂಡರಾದ ಕೆ.ಎಸ್.ಕೊಡತಗೇರಿ, ರಾಜೇಶ ರೆಡ್ಡಿ ಅಂಗಡಿ, ಶರಣಪ್ಪ ಕೊತ್ವಾಲ್, ಆರ್.ವಿಜಯಕುಮಾರ್, ವಿರೂಪಾಕ್ಷಗೌಡ, ಅರ್ಜುನ ನಾಯಕ್, ಚನ್ನಬಸವ ಜೇಕಿನ್, ರಮೇಶ ಕೋಟಿ, ನಾಸೀರ್ ಕಂಠಿ, ಹನುಮಂತ ಹಳ್ಳಿಕೇರಿ, ಸಂಗಮೇಶ ಬಾದವಾಡಗಿ ಸೇರಿ ಇತರರು ಇದ್ದರು.