ಕೇಂದ್ರ ಸರ್ಕಾರದ ವಿರುದ್ಧ ಕನಕಗಿರಿಯಲ್ಲಿ ಟ್ರ್ಯಾಕ್ಟರ್ ರ‌್ಯಾಲಿ; ದಾಖಲೆ ಪರಿಶೀಲಿಸಿದ RTO ಅಧಿಕಾರಿಗಳು

ಈ ಸುದ್ದಿ ಹಂಚಿಕೊಳ್ಳಿ:

ವಿಜಯಪರ್ವ ಸುದ್ದಿ, ಕಾರಟಗಿ
ಕೇಂದ್ರ ಸರ್ಕಾರ ಅನುಷ್ಠಾನಕ್ಕೆ ಮುಂದಾಗಿರೋ ಕೃಷಿ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರುದ್ಧ ರಾಜ್ಯದಲ್ಲೂ ಟ್ರ್ಯಾಕ್ಟರ್ ರ‌್ಯಾಲಿ ಸೋಮವಾರ ನಡೆಯಿತು.

ಕೊಪ್ಪಳ ಜಿಲ್ಲೆ ಕನಕಗಿರಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನೆ ಭಾಗವಾಗಿ ಟ್ರ್ಯಾಕ್ಟರ್ ರ‌್ಯಾಲಿ ನಡೆಯಿತು.
ಕನಕಗಿರಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಜಂಗಮರ ಕಲ್ಗುಡಿ ಗ್ರಾಮದಿಂದ ರ‌್ಯಾಲಿ ಆರಂಭವಾಗಿದ್ದು, ಸಿದ್ದಾಪೂರ- ಕಾರಟಗಿ-ನವಲಿ ಮಾರ್ಗವಾಗಿ ಕನಕಗಿರಿ ತಲುಪಲಿದೆ.

ರ‌್ಯಾಲಿ ಆರಂಭದಲ್ಲಿ 165 ಟ್ರ್ಯಾಕ್ಟರ್ ಭಾಗಿಯಾಗಿದ್ದು, ನಡುವೆಯೂ ಒಂದಷ್ಟು ಟ್ರ್ಯಾಕ್ಟರ್ ಸೇರಿಕೊಳ್ಳುವ ಸಾಧ್ಯತೆ ಇದೆ. ಮಾಜಿ ಸಚಿವ ಹಾಗೂ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ನೇತೃತ್ವದಲ್ಲಿ ರ‌್ಯಾಲಿ ಆಯೋಜಿಸಲಾಗಿದ್ದು, ಮಾಜಿ ಸಂಸದ ಶಿವರಾಮಗೌಡ, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಭಾಗಿಯಾಗಿದ್ದಾರೆ.

ದಾಖಲೆ‌ ಪರಿಶೀಲನೆ: ರ‌್ಯಾಲಿಯಲ್ಲಿ ಭಾಗವಹಿಸುವ ಟ್ರ್ಯಾಕ್ಟರ್ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. RTO ಅಧಿಕಾರಿಗಳು ಆಗಮಿಸಿ, ಚಾಲಕರ ಲೈಸೆನ್ಸ್ ಮತ್ತು ದಾಖಲಾತಿ ಇರುವ ಟ್ರ್ಯಾಕ್ಟರ್ ಗಳಿಗೆ ಮಾತ್ರ ರ‌್ಯಾಲಿಯಲ್ಲಿ ಭಾಗವಹಿಸಲು ಅವಕಾಶ ನೀಡುವುದಾಗಿ ತಿಳಿಸಿದ್ದಾರೆ. ಅಧಿಕಾರಿಗಳ ಕ್ರಮವನ್ನು ಕಾಂಗ್ರೆಸ್ ನಾಯಕರು ವಿರೋಧಿಸಿದ್ದು, ಆರ್ ಟಿ ಓ ಹಾಗೂ ಪೊಲೀಸ್ ರ ವಿರುದ್ಧ ಕಾಂಗ್ರೆಸ್ ನಾಯಕರ ಆಕ್ರೋಶ ವ್ಯಕ್ತಪಡಿಸಿದರು.

1+
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 436
error: Content is protected !!