ದಾಖಲೆ ಸೃಷ್ಟಿಸಿದ್ದ ಬಿ. ಫೌಝಿಯಾ ತರನಮ್ ಈಗ ಕೊಪ್ಪಳ ಜಿ.ಪಂ. ಸಿಇಒ

ಈ ಸುದ್ದಿ ಹಂಚಿಕೊಳ್ಳಿ:

ವಿಜಯ ಪರ್ವ ಸುದ್ದಿ | ಕೊಪ್ಪಳ

ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ (ಸಿಇಒ) ಹಾಗೂ ತೋಟಗಾರಿಕಾ ಇಲಾಖೆಯ ನಿರ್ದೇಶಕಿಯಾಗಿದ್ದ ಬಿ. ಫೌಝಿಯಾ ತರನಮ್‌ ಈಗ ಕೊಪ್ಪಳ ಜಿ.ಪಂ. ಸಿಇಒ ಆಗಿ ಬಂದಿದ್ದಾರೆ. ಚಿಕ್ಕಬಳ್ಳಾಪುರ ಜಿ.ಪಂ. ಸಿಇಒ ಆಗುವುದಕ್ಕೂ ಮುನ್ನ ಫೌಝಿಯಾ ಅವರು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತೆಯಾಗಿದ್ದರು.

2015 ನೇ ಬ್ಯಾಚಿನ ಈ ಐಎಎಸ್ ಅಧಿಕಾರಿ 31ನೇ ರ‍್ಯಾಂಕ್‌ ಪಡೆದ ಪ್ರತಿಭಾವಂತೆ. ಚಿಕ್ಕಬಳ್ಳಾಪುರ ಜಿ.ಪಂ. ಸಿಇಒ ಆಗಿದ್ದಾಗ, ಅವರು ಮಾಡಿರುವ ಜನಪರ ಕೆಲಸಗಳು ರಾಜ್ಯಾದ್ಯಂತ ಜನರ ಗಮನ ಸೆಳೆದಿದ್ದವು.

ಫೌಝಿಯಾ ಅವರಿಗೆ ಹೆಸರು ತಂದುಕೊಟ್ಟಿದ್ದು 2019-20ನೇ ಸಾಲಿನ ವಾರ್ಷಿಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ. ಇಡೀ ರಾಜ್ಯದಲ್ಲಿಯೇ ಚಿಕ್ಕಬಳ್ಳಾಪುರ ಜಿಲ್ಲೆಗೆ ಅದರ ಶೈಕ್ಷಣಿಕ ಇತಿಹಾಸದಲ್ಲಿ ಮೊದಲ ಸ್ಥಾನ ಬರುವಂತೆ ಮಾಡುವಲ್ಲಿ ಫೌಜಿಯಾ ಅವರ ಪಾತ್ರ ಪ್ರಮುಖವಾಗಿತ್ತು.

ಚಿಕ್ಕಬಳ್ಳಾಪುರದಲ್ಲಿ ನರೇಗಾ ಯೋಜನೆಯನ್ನು ಜಿಲ್ಲಾದ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ್ದ ಫೌಝಿಯಾ ಅವರು ಮಾನವ ದಿನಗಳ ಸೃಜನೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದರು. ನರೇಗಾ ಯೋಜನೆ ಮೂಲಕವೇ ಸರ್ಕಾರಿ ಶಾಲೆಗಳ ಪುನಶ್ಚೇತನಕ್ಕೆ ಮುಂದಾಗಿದ್ದ ಅವರು ತಮ್ಮ ಆಡಳಿತದ ಕಾರ್ಯವೈಖರಿ ಮೂಲಕ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದರು. ಐಎಎಸ್‌ ಅಧಿಕಾರಿಯಾದರೂ ಜಿಲ್ಲೆಯ ಗ್ರಾಮೀಣ ಕನ್ನಡ ಶಾಲೆಗಳಿಗೆ ಹೋಗಿ ಪಾಠ ಮಾಡಿದ್ದು ಅವರ ಹೆಗ್ಗಳಿಕೆ.

ಇಂತಹ ಸಕ್ರಿಯ ಅಧಿಕಾರಿ ಈಗ ಕೊಪ್ಪಳ ಜಿಲ್ಲಾ ಪಂಚಾಯತ್‌ ಸಿಇಒ. ಜಿಲ್ಲೆಯ ಪ್ರಗತಿಗೆ ಅವರಿಂದ ಹೆಚ್ಚಿನ ಕೊಡುಗೆಯ ನಿರೀಕ್ಷೆಯಿದೆ.

+3
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 669