ಸಂಸದರಿಂದ ಹಾಲುಮತ ಸಮುದಾಯದ ಭಾವನೆಗೆ ಧಕ್ಕೆ

ಈ ಸುದ್ದಿ ಹಂಚಿಕೊಳ್ಳಿ:

ವಿಜಯಪರ್ವ ಸುದ್ದಿ‌| ಕೊಪ್ಪಳ

ಸಂಸದ ಸಂಗಣ್ಣ ಕರಡಿ ಅವರು ನಗರದ ಕೇಂದ್ರೀಯ ಬಸ್ ನಿಲ್ದಾಣದ ಎದುರುಗಡೆ ದಾಸ ಶ್ರೇಷ್ಠ ಕನಕದಾಸರ ವೃತ್ತ ನಿರ್ಮಾಣ ಕಾರ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವ ಮೂಲಕ ಹಾಲುಮತ ಸಮುದಾಯದ ಭಾವನೆಗೆ ದಕ್ಕೆ ತಂದಿದ್ದಾರೆ ಎಂದು ಹಾಲುಮತ ಮಹಾಸಭಾ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಆರೋಪಿಸಿದ್ದಾರೆ.
ಈ ಕುರಿತು ಸಂಗಣ್ಣ ಕರಡಿ ಅವರ ವಿರುದ್ಧ ಬರೆಯಲಾದ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕಳಿಸಲಾಯಿತು.
ಕನಕದಾಸ ಪ್ರತಿಮೆ ನಿರ್ಮಾಣ ಪ್ರಕ್ರಿಯೆ ಹೊಸದೇನಲ್ಲ. ಇದು 35 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ವೃತ್ತ. ಕನಕದಾಸರ ಉದ್ಯಾನವನ ಹಾಗೂ ಪ್ರತಿಮೆಯನ್ನು ಸ್ಥಾಪಿಸಲು ನಗರಸಭೆ ಸಂವಿಧಾನಬದ್ಧವಾಗಿ ಪ್ರಕ್ರಿಯೆಗಳನ್ನು ನಡೆಸಿದೆ. ಆದರೂ ಕೂಡ ಸಂಸದರು ಆಕ್ಷೇಪ ಎತ್ತಿರುವುದು ಅತ್ಯಂತ ಖಂಡನಾರ್ಹ. ಇದು ಕನಕದಾಸರಿಗೆ ಮಾಡಿದ ಅವಮಾನ ಕನಕದಾಸರ ಭಕ್ತರು ಹಾಗೂ ಹಾಲುಮತ ಸಮಾಜ ಇದನ್ನು ಕ್ಷಮಿಸಲಾರರು. ಸಂಗಣ್ಣ ಕರಡಿ ಅವರು ಮೂವತ್ತು ವರ್ಷಗಳಿಂದ ಅಧಿಕಾರದಲ್ಲಿದ್ದರೂ ಕೂಡ ಕನಕದಾಸ ವೃತ್ತ ನಿರ್ಮಾಣ ಮಾಡುವ ಕಾರ್ಯದಲ್ಲಿ ಆಸಕ್ತಿ ವಹಿಸಿಲ್ಲ ಎಂದು ಅವರು ಆರೋಪಿಸಿದರು.
ಜನಪ್ರತಿನಿಧಿಯಾದವರು ಸರ್ವ ಜನಾಂಗವನ್ನು, ಎಲ್ಲಾ ಸಮುದಾಯಗಳನ್ನು, ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣಬೇಕು, ಆದರೆ ಕೊಪ್ಪಳ ಸಂಗಣ್ಣ ಕರಡಿ ಅವರು ಹಾಲುಮತ ಸಮುದಾಯದ ಭಾವನೆಗೆ ನೋವುಂಟು ಮಾಡಿರುವುದು ವಿಷಾದದ ಸಂಗತಿ. ಕೂಡಲೇ ಸಂಸದರು ಬರೆದ ಪತ್ರವನ್ನು ವಾಪಸ್ ಪಡೆಯಬೇಕು. ಒಂದು ವೇಳೆ ವಾಪಸ್ ಪಡೆದಿದ್ದರೆ ಅವರ ವಿರುದ್ಧ ರಾಜ್ಯಾದ್ಯಂತ ಹಾಲುಮತ ಮಹಾಸಭಾ ಹೋರಾಟಕ್ಕೆ ಸಜ್ಜಾಗಬೇಕಾಗುತ್ತದೆ ಎಂದು ರುದ್ರಣ್ಣ ಗುಳಗುಳಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಹಾಲುಮತ ಮಹಾಸಭಾ ಜಿಲ್ಲಾಧ್ಯಕ್ಷ ಹನುಮಂತಪ್ಪ ಕೌದಿ, ಉಪಾಧ್ಯಕ್ಷ ಕುಬೇರ ಮಜ್ಜಿಗಿ, ಪದಾಧಿಕಾರಿಗಳಾದ ದ್ಯಾಮಣ್ಣ ಕರಿಗಾರ್, ಲಿಂಗರಾಜ ಚಳಗೇರಿ, ಹನುಮಂತಪ್ಪ ಪೂಜಾರ, ಮಂಜುನಾಥ್ ಬಂಗಾಳಿ, ದ್ಯಾಮಣ್ಣ ಮ್ಯಾದ್ನೇರಿ, ಬಸವರಾಜ ಗುರಿಕಾರ, ಆನಂದ ಕಿನ್ನಾಳ, ರಮೇಶ್ ಹೊಳೆಯಚಿ, ಶಿವಾನಂದ ಎಲ್ಲಮ್ಮನವರ, ಸೋಮಶೇಖರ್ ಮೇಟಿ, ಪರಶುರಾಮ್ ಅಣ್ಣಿಗೇರಿ, ಪ್ರಕಾಶ್ ಕಿನ್ನಾಳ, ನಿಂಗಜ್ಜ ಲಿಂಗದಳ್ಳಿ ಇತರರು ಭಾಗವಹಿಸಿದ್ದರು.

+1
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 218