ಇದು ಬೊಮ್ಮಾಯಿಯದಲ್ಲ, ಬಿಜೆಪಿ ಹೈಕಮಾಂಡ್‌ ಸಂಪುಟ

ಈ ಸುದ್ದಿ ಹಂಚಿಕೊಳ್ಳಿ:

ವಿಜಯ ಪರ್ವ ಸುದ್ದಿ | ಕೊಪ್ಪಳ

ಅಚ್ಚರಿಯ ತೀರ್ಮಾನಗಳ ಮೂಲಕವೇ ಸದಾ ಗಮನ ಸೆಳೆಯುವ ಬಿಜೆಪಿ ಹೈಕಮಾಂಡ್, ಈ ಬಾರಿಯೂ ತನ್ನ ಆಟ ಮುಂದುವರೆಸಿದೆ. ರಾಜ್ಯ ಸರ್ಕಾರದ ನೂತನ ಸಂಪುಟವು ಸಿಎಂ ಬಸವರಾಜ ಬೊಮ್ಮಾಯಿ ಅವರ ಸಂಪುಟ ಅಲ್ಲ, ಅದು ಬಿಜೆಪಿ ಹೈಕಮಾಂಡ್‌ನ ಸಂಪುಟ ಅನ್ನೋದು ಮೇಲ್ನೋಟಕ್ಕೇ ಸಾಬೀತಾಗುವಂತಿದೆ.

ಪಕ್ಷ ಇಲ್ಲಿ ಯಾರ ಓಲೈಕೆಯನ್ನೂ ಮಾಡಿಲ್ಲ. ಭಿನ್ನಮತೀಯರಿಗೆ ಸೊಪ್ಪನ್ನೂ ಹಾಕಿಲ್ಲ, ಜೊತೆಗೆ ಪಕ್ಷಕ್ಕೆ ದುಡಿದವರನ್ನೂ ಮರೆತಿಲ್ಲ. ಹಾಗಂತ ಜಾತಿ ಲೆಕ್ಕಾಚಾರದ ಸಂಪ್ರದಾಯವನ್ನೂ ಮೀರಿಲ್ಲ. ಇಲ್ಲಿ ಏರುಪೇರಾಗಿರುವುದು ಪ್ರಾಂತ್ಯವಾರು ಲೆಕ್ಕಾಚಾರ ಹಾಗೂ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದವರ ನಿರೀಕ್ಷೆ ಮಾತ್ರ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ 29 ಸಚಿವರ ನೂತನ ಸಂಪುಟ.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ನೂತನ ಸಚಿವ ಸಂಪುಟ ಇಂದು ಅಸ್ತಿತ್ವಕ್ಕೆ ಬಂದಿದ್ದು ಮಧ್ಯಾಹ್ನ 2:15ಕ್ಕೆ ಪ್ರಮಾಣವಚನ ಕಾರ್ಯಕ್ರಮ ನಡೆಯಿತು. ಈ ಸಲದ ಸಂಪುಟ ರಚನೆಯಲ್ಲಿ ಐವರು ಹೊಸ ಮುಖಗಳಿಗೆ ಈ ಅವಕಾಶ ಸಿಕ್ಕಿದೆ. ಒಟ್ಟು 29 ಮಂದಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಎಂಟು ಹಿರಿಯರನ್ನು ಸಂಪುಟದಿಂದ ಕೈಬಿಡಲಾಗಿದೆ.

ಬಳ್ಳಾರಿ, ಕಲಬುರಗಿ, ಹಾಸನ, ದಾವಣಗೆರೆ, ಯಾದಗಿರಿ, ರಾಮನಗರ, ಚಾಮರಾಜ ನಗರ, ಕೊಡಗು, ಚಿಕ್ಕಮಗಳೂರು, ವಿಜಯಪುರ, ಮೈಸೂರು ಜಿಲ್ಲೆಗಳಿಂದ ಯಾರೂ ಸಚಿವರಿಲ್ಲ. ಬೆಂಗಳೂರಿನ 6 ಜನರಿಗೆ ಸ್ಥಾನ ಸಿಕ್ಕಿದೆ.

ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟ ಎಲ್ಲರ ಲೆಕ್ಕಾಚಾರವನ್ನೇ ತಲೆಕೆಳಗು ಮಾಡಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಬಿ.ಎಸ್. ಯಡಿಯೂರಪ್ಪನವರ ರಾಜೀನಾಮೆ ಬಳಿಕ ಅವರ ಮಕ್ಕಳಿಗೆ, ಬೆಂಬಲಿಗರಿಗೆ ಸ್ಥಾನಮಾನ ಸಿಗಬಹುದು ಎಂಬ ನಿರೀಕ್ಷೆಗಳು ಸುಳ್ಳಾಗಿವೆ. ಬಿ.ವೈ. ವಿಜಯೇಂದ್ರ ಡಿಸಿಎಂ ಆಗಿಬಿಡುತ್ತಾರೆ ಎಂಬ ವದಂತಿಗೂ ಹೈಕಮಾಂಡ್‌ ತೆರೆ ಎಳೆದಿದೆ.

ಅದೇ ರೀತಿ ಯಡಿಯೂರಪ್ಪ ಆಪ್ತ ನಾನು ಎಂದು ಬಹಿರಂಗವಾಗಿಯೇ ಎದೆ ತಟ್ಟಿಕೊಂಡು ಓಡಾಡ್ತಿದ್ದ ರೇಣುಕಾಚಾರ್ಯ ಅವರನ್ನೂ ಸಂಪುಟದಿಂದ ದೂರ ಇಡಲಾಗಿದೆ. ಅಚ್ಚರಿಯ ಸುದ್ದಿ ನೀಡುತ್ತೇನೆ ಎನ್ನುತ್ತಿದ್ದ ವಿಜಯಪುರದ ಹುಲಿ ಬಸನಗೌಡ ಪಾಟೀಲ್, ನಾನೇ ಮುಖ್ಯಮಂತ್ರಿ ಎಂದು ಓಡಾಡುತ್ತಿದ್ದ ಅರವಿಂದ್ ಬೆಲ್ಲದ್ ಅವರನ್ನೂ ಸಂಪುಟಕ್ಕೆ ಸೇರಿಸಿಕೊಂಡಿಲ್ಲ. ಇದರ ಜೊತೆಗೆ ಭಿನ್ನ ನಾಯಕ ಸಿ.ಪಿ. ಯೋಗೇಶ್ವರ್‌ ಕೈಬಿಡುವ ಮೂಲಕ ಭಿನ್ನ ನಾಯಕರಿಗೆ ಬಿಸಿ ಮುಟ್ಟಿಸಲಾಗಿದೆ.

ಡಿಸಿಎಂ ಸ್ಥಾನ ಅಲಂಕರಿಸಿದ್ದ ಡಾ. ಅಶ್ವತ್ಥ ನಾರಾಯಣ್, ಲಕ್ಷ್ಮಣ ಸವದಿ ಹಾಗೂ ಗೋವಿಂದ ಕಾರಜೋಳ ಅವರಿಗೆ ಡಿಮೋಷನ್ ಆಗಿದೆ. ಹಾಗೆ ನೋಡಿದರೆ ಈ ಬಾರಿ ಡಿಸಿಎಂ ಸ್ಥಾನವೇ ಇಲ್ಲ. ಈ ಹಿಂದೆ ಡಿಸಿಎಂ ಆಗಿದ್ದ ಲಕ್ಷ್ಮಣ ಸವದಿ ಅವರಿಗೆ ಈ ಸಲ ಸಚಿವ ಸ್ಥಾನವೂ ಸಿಕ್ಕಿಲ್ಲ.

ಚುನಾವಣೆಗೆ ಇನ್ನು ಎರಡೇ ವರ್ಷ ಬಾಕಿ ಇರುವ ಹಿನ್ನೆಲೆಯಲ್ಲಿ ಪದವಿಗಿಂತ ಕೆಲಸ ಮುಖ್ಯ ಎಂಬ ನಿಲುವನ್ನು ಹೈಕಮಾಂಡ್ ಹೊರಹಾಕಿದಂತಿದೆ. ಹೀಗಾಗಿ, ಒಂದಷ್ಟು ಹಳಬರನ್ನು ಹೊರಗಿಟ್ಟು ಹೊಸ ಮುಖಗಳಿಗೆ, ಯುವ ಹಾಗೂ ಉತ್ಸಾಹಿಗಳಿಗೆ ಮಣೆ ಹಾಕಿದೆ. ಶಿಕ್ಷಣ ಸಚಿವರಾಗಿದ್ದ ಸುರೇಶ್ ಕುಮಾರ್, ಅರಣ್ಯ ಸಚಿವರಾಗಿದ್ದ ಅರವಿಂದ ಲಿಂಬಾವಳಿ, ಕೈಗಾರಿಕಾ ಸಚಿವರಾಗಿದ್ದ ಜಗದೀಶ್ ಶೆಟ್ಟರ್ ಸಂಪುಟದಿಂದ ಹೊರಗೆ ಉಳಿದಿದ್ದಾರೆ. ಇದೇ ಕಾರಣಕ್ಕಾಗಿಯೇ ಸುನೀಲ್ ಕುಮಾರ್, ಅರಗ ಜ್ಞಾನೇಂದ್ರ, ಮುನಿರತ್ನ, ಹಾಲಪ್ಪ ಆಚಾರ್‌, ಬಿ. ಸಿ. ನಾಗೇಶ್‌ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ.

ಜಾತಿ ಲೆಕ್ಕಾಚಾರವೂ ಒಂದು ಹಂತಕ್ಕೆ ಅಳೆದು ತೂಗಿ ಮಾಡಿದಂತಿದೆ. ಒಟ್ಟು 8 ಲಿಂಗಾಯತ, 7 ಒಬಿಸಿ, 7 ಒಕ್ಕಲಿಗ, 3 ದಲಿತ, ಇಬ್ಬರು ಬ್ರಾಹ್ಮಣರು ಬೊಮ್ಮಾಯಿ ಸಂಪುಟ ಸೇರಿದ್ದಾರೆ. ಎದ್ದು ಕಾಣುವ ಲೋಪ ಅಂದರೆ, ಪ್ರಾದೇಶಿಕ ಅಸಮಾನತೆಯದ್ದು. ರಾಜ್ಯದ 13 ಜಿಲ್ಲೆಗಳಿಗೆ ಪ್ರಾತಿನಿಧ್ಯವೇ ಸಿಕ್ಕಿಲ್ಲ. ಮೈಸೂರು, ಹಾಸನ, ದಾವಣಗೆರೆ, ಬಳ್ಳಾರಿಯಂಥಾ ದೊಡ್ಡ ಜಿಲ್ಲೆಗಳಿಗೇ ಪ್ರಾತಿನಿಧ್ಯ ಸಿಗದಿರೋದು ಭಾರೀ ಅಸಮಾಧಾನ ಹುಟ್ಟುಹಾಕಿದೆ. ಮುಂದಿನ ದಿನಗಳಲ್ಲಿ ಇದು ಭಿನ್ನಮತೀಯ ಚಟುವಟಿಕೆಗಳಿಗೆ ಕಾರಣವಾಗಬಹುದು ಎಂಬ ಬೆಳವಣಿಗೆಯನ್ನೂ ನೂತನ ಸಂಪುಟ ರಚನೆ ಹುಟ್ಟುಹಾಕಿದೆ.

+2
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 293