ಲಕ್ಷ ರೂಪಾಯಿ ಎಗರಿಸಿದ ಚಾಲಾಕಿ ಕಳ್ಳ: ಸಿಸಿಟಿವಿಯಲ್ಲಿ ದಾಖಲು

ಈ ಸುದ್ದಿ ಹಂಚಿಕೊಳ್ಳಿ:

ವಿಜಯ ಪರ್ವ ಸುದ್ದಿ | ಕೊಪ್ಪಳ

ಚಾಲಾಕಿ ಕಳ್ಳನೊಬ್ಬ ಕ್ಷಣಾರ್ಧದಲ್ಲಿ ರೂ.1.05 ಲಕ್ಷ ನಗದನ್ನು ಬೈಕ್‌ ಡಿಕ್ಕಿಯಿಂದ ಎಗರಿಸಿದ ಘಟನೆ ನಗರದ ಕಾವೇರಿ ಪೆಟ್ರೋಲ್‌ ಬಂಕ್‌ನಲ್ಲಿ ಇಂದು ಬೆಳಗ್ಗೆ ನಡೆದಿದೆ. ಇಡೀ ಘಟನೆ ಒಂದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುದ್ದು, ಪೊಲೀಸರು ಚಾಲಾಕಿ ಕಳ್ಳನ ಪತ್ತೆಗೆ ಶ್ರಮಿಸುತ್ತಿದ್ದಾರೆ.

ಲಾಚನಕೇರಿಯ ಚನ್ನಪ್ಪಗೌಡ ತಂದಿ ಹನುಮನಗೌಡ ಪಾಟೀಲ್‌ ಎಂಬ ರೈತ, ತಮ್ಮ ಬೆಳೆಯನ್ನು ಎಪಿಎಂಸಿಯಲ್ಲಿ ಮಾರಿ, ಅಲ್ಲಿ ನೀಡಿದ್ದ ಚೆಕ್‌ ಅನ್ನು ಕೆನರಾ ಬ್ಯಾಂಕ್‌ನಲ್ಲಿ ನಗದೀಕರಿಸಿದ್ದರು. ಬಹುಶಃ ಕಳ್ಳರ ತಂಡದ ಸದಸ್ಯನೊಬ್ಬ ಇದನ್ನು ಗಮನಿಸಿದ್ದಾನೆ. ಬ್ಯಾಂಕ್‌ನಿಂದ ಪಡೆದ ಹಣವನ್ನು ಪ್ಲ್ಯಾಸ್ಟಿಕ್‌ ಕವರ್‌ನಲ್ಲಿಟ್ಟು ಬೈಕ್‌ನ ಡಿಕ್ಕಿಯಲ್ಲಿರಿಸಿಕೊಂಡು ಊರಿನತ್ತ ಹೊರಟ ಚನ್ನಪ್ಪಗೌಡರು ಹೊಸಪೇಟೆ ರಸ್ತೆಯಲ್ಲಿರುವ ಕಾವೇರಿ ಪೆಟ್ರೋಲ್‌ ಬಂಕ್‌ಗೆ ತೆರಳಿದ್ದಾರೆ.

ಅಲ್ಲಿ ಸರದಿಯಲ್ಲಿ ಕಾಯುತ್ತಿದ್ದಾಗ, ಚಾಲಾಕಿ ಯುವಕಳ್ಳನೊಬ್ಬ ಅವರ ಬೈಕ್‌ ಸಮೀಪಿಸುತ್ತಾನೆ. ಗೌಡ್ರು ಪೆಟ್ರೋಲ್‌ ಕ್ಯೂನಲ್ಲಿ ಮುಂದೆ ಹೋಗುವುದರತ್ತ ಗಮನ ಹರಿಸಿದ್ದರ ಲಾಭ ಪಡೆದ ಆತ, ಕ್ಷಣಾರ್ಧದಲ್ಲಿ ಬೈಕ್‌ ಡಿಕ್ಕಿ ತೆಗೆದು, ಹಣವಿದ್ದ ಪ್ಲ್ಯಾಸ್ಟಿಕ್‌ ಕವರ್‌ ಎತ್ತಿಕೊಂಡು ಹೋಗುವುದು ಸಿಸಿಟಿವಿ ಫೂಟೇಜ್‌ನಲ್ಲಿ ದಾಖಲಾಗಿದೆ.

ವಿಡಿಯೋ ಲಿಂಕ್:‌ https://youtu.be/IdGgGyY1wk0

ಆಂಧ್ರ ಮೂಲದ ಕಳ್ಳರ ತಂಡ ಇಂತಹ ಕೃತ್ಯಗಳನ್ನು ಎಸಗುತ್ತಿದ್ದಾರೆ ಎಂಬುದು ಪೊಲೀಸ್‌ ಮೂಲದ ಮಾಹಿತಿ. ರೈತರನ್ನೇ ಗುರಿಯಾಗಿಸಿಕೊಳ್ಳುವ ಈ ತಂಡ, ವಿವಿಧ ಹಂತಗಳಲ್ಲಿ ಕಾರ್ಯಾಚರಣೆ ಎಸಗುತ್ತದೆ. ಒಬ್ಬ ಎಪಿಎಂಸಿಯಲ್ಲಿದ್ದು ಚೆಕ್‌ ಪಡೆಯುವ ರೈತರ ಮಾಹಿತಿಯನ್ನು ರವಾನಿಸುತ್ತಾನೆ. ಮತ್ತೊಬ್ಬ ಅಂತಹ ರೈತರನ್ನು ಹಿಂಬಾಲಿಸಿಕೊಂಡು ಬ್ಯಾಂಕ್‌ಗೆ ಹೋಗುತ್ತಾನೆ. ನಂತರ ಇನ್ನೊಬ್ಬ ಬ್ಯಾಂಕ್‌ನಿಂದ ರೈತನನ್ನು ಹಿಂಬಾಲಿಸಿ, ಹಣ ಎಗರಿಸುವ ಅವಕಾಶಗಳನ್ನು ಹುಡುಕುತ್ತಾನೆ ಎನ್ನುತ್ತಾರೆ ಪೊಲೀಸರು.

ಕಳ್ಳನ ಚಹರೆ ಸಿಸಿಟಿವಿಯಲ್ಲಿ ಸ್ಪಷ್ಟವಾಗಿರುವುದರಿಂದ, ಶೀಘ್ರ ಆತನನ್ನು ಬಂಧಿಸುವ ವಿಶ್ವಾಸ ಪೊಲೀಸರದು.

+1
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 996