ಶಿಕ್ಷಕ ಕಾಸಿಂ ಅಕ್ರಮ ನಿಯೋಜನೆ ರದ್ದು: ʼವಿಜಯ ಪರ್ವʼ ವರದಿಗಳ ಫಲಶೃತಿ

ಈ ಸುದ್ದಿ ಹಂಚಿಕೊಳ್ಳಿ:

ವಿಜಯ ಪರ್ವ ಸುದ್ದಿ | ಕೊಪ್ಪಳ

ಶಿಕ್ಷಕರನ್ನು ಬೋಧಕೇತರ ಹುದ್ದೆಗಳಿಗೆ ನಿಯೋಜನೆ ಮಾಡುವ ದಂಧೆಗೆ ಕಡಿವಾಣ ಹಾಕಿದೆ ಸರಕಾರ.

ಇದರ ಅಂಗವಾಗಿ ಕೊಪ್ಪಳ ಜಿಲ್ಲೆಯ ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕರ ಹುದ್ದೆಗೆ ಅಕ್ರಮವಾಗಿ ನಿಯೋಜನೆಗೊಂಡಿದ್ದ ಕೊಪ್ಪಳ ನಗರದ ಹೈಸ್ಕೂಲ್‌ ಶಿಕ್ಷಕ ಕಾಸಿಂ ಸಂಕನೂರ ಅವರ ನಿಯೋಜನೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಈ ಕುರಿತು ಶಿಕ್ಷಣ ಇಲಾಖೆಯ (ಪ್ರೌಢಶಿಕ್ಷಣ) ಸರಕಾರದ ಆಧೀನ ಕಾರ್ಯದರ್ಶಿಗಳು ಆಗಸ್ಟ್‌ 6 ರಂದು ಹೊರಡಿಸಿರುವ ಆದೇಶದ ಪ್ರತಿ ʼವಿಜಯ ಪರ್ವʼಕ್ಕೆ ಲಭ್ಯವಾಗಿದೆ.

ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ಕೊಪ್ಪಳ ಜಿಲ್ಲಾ ವ್ಯವಸ್ಥಾಪಕರ ಹುದ್ದೆಗೆ ಅಕ್ರಮವಾಗಿ ನಿಯೋಜನೆಗೊಂಡಿದ್ದ ನಗರದ ಹೈಸ್ಕೂಲ್ ಶಿಕ್ಷಕ ಕಾಸಿಂ ಸಂಕನೂರ ನಿಯೋಜನೆ ರದ್ದುಗೊಳಿಸಿ ಸರಕಾರ ಹೊರಡಿಸಿದ ಆದೇಶ (ಪುಟ 1)

ಈ ಅಕ್ರಮ ನಿಯೋಜನೆ ರದ್ದುಪಡಿಸಿರುವ ಕುರಿತು ಕೊಪ್ಪಳ ಡಿಡಿಪಿಐ ದೊಡ್ಡಬಸಪ್ಪ ನೀರಲಕೇರಿ ಅವರು ಜೂನ್‌ 16 ರಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದರು. ಕಾಸಿಂ ಸಂಕನೂರ ಅವರ ನಿಯೋಜನೆಯನ್ನು ರದ್ದುಗೊಳಿಸಬೇಕು ಹಾಗೂ ಅವರನ್ನು ಮಾತೃ ಇಲಾಖೆಗೆ ಕಳಿಸಬೇಕೆಂಬ ವಿಷಯ ಕುರಿತು ಪ್ರಸ್ತಾಪಿಸಿದ್ದ ಡಿಡಿಪಿಐ ಅವರು, ಈ ಕುರಿತಂತೆ ಕಲಬುರಗಿಯ ಶಿಕ್ಷಣ ಇಲಾಖೆಯ ಅಪರ ಆಯುಕ್ತರೊಂದಿಗೆ ದಿನಾಂಕ 29-4-2021 ರಂದು ನಡೆಸಿದ ವೆಬಿನಾರ್‌ ಚರ್ಚೆಯನ್ನು ಉಲ್ಲೇಖಿಸಿದ್ದರು. ಜೊತೆಗೆ, ಸರಕಾರ ಈ ಕುರಿತು ದಿನಾಂಕ 8-11-2011 ರಂದು ಹೊರಡಿಸಿದ್ದ ಆದೇಶ ( ಇಡಿ 300 ಡಿಜಿಡಿ) ಕುರಿತೂ ಅವರು ಗಮನ ಸೆಳೆದಿದ್ದರು.

ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ಕೊಪ್ಪಳ ಜಿಲ್ಲಾ ವ್ಯವಸ್ಥಾಪಕರ ಹುದ್ದೆಗೆ ಅಕ್ರಮವಾಗಿ ನಿಯೋಜನೆಗೊಂಡಿದ್ದ ನಗರದ ಹೈಸ್ಕೂಲ್ ಶಿಕ್ಷಕ ಕಾಸಿಂ ಸಂಕನೂರ ನಿಯೋಜನೆ ರದ್ದುಗೊಳಿಸಿ ಸರಕಾರ ಹೊರಡಿಸಿದ ಆದೇಶ (ಪುಟ 2)

ʼವಿಜಯ ಪರ್ವʼ ವರದಿ ಹಿನ್ನೆಲೆಯಲ್ಲಿ ಕ್ರಮ

ಕಾಸಿಂ ಸಂಕನೂರ ನಿಯೋಜನೆಯೇ ಅಕ್ರಮವಾಗಿದೆ ಹಾಗೂ ಪ್ರಭಾರಿ ಡಿಡಿಪಿಐ ಎಂ.ಎಸ್.‌ ಬಸವರಾಜಯ್ಯ ಮಾಡಿದ ಹುನ್ನಾರವಿದು ಎಂದು ʼವಿಜಯ ಪರ್ವʼ ಪ್ರಮುಖ ವರದಿಗಳನ್ನು ಪ್ರಕಟಿಸಿ ಇಲಾಖೆಯ ಗಮನ ಸೆಳೆದಿತ್ತು. ಈ ವರದಿಗಳ ಹಿನ್ನೆಲೆಯಲ್ಲಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗದ ಅಪರ ಆಯುಕ್ತ ನಳಿನ್ ಅತುಲ್‌ ಅವರು ವರದಿ ಸಲ್ಲಿಸುವಂತೆ ಕೊಪ್ಪಳ ಡಿಡಿಪಿಐಗೆ ಆದೇಶ ನೀಡಿದ್ದರು. ಯಾವ್ಯಾವ ಶಿಕ್ಷಕರನ್ನು ಈ ರೀತಿ ಅನ್ಯ ಇಲಾಖೆಗೆ ನಿಯೋಜನೆ ಮೇರೆಗೆ ಕಳಿಸಲಾಗಿದೆ ಎಂಬ ವಿವರಗಳನ್ನೂ ನೀಡುವಂತೆ ಸೂಚಿಸಿದ್ದರು.

ಆ ಪ್ರಕಾರ ಕೊಪ್ಪಳ ಡಿಡಿಪಿಐ ನೀಡಿದ ಮಾಹಿತಿ ಆಧರಿಸಿ, ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ಕೊಪ್ಪಳ ಜಿಲ್ಲಾ ವ್ಯವಸ್ಥಾಪಕರ ಹುದ್ದೆಗೆ ಮಾಡಲಾದ ಕಾಸಿಂ ಸಂಕನೂರ ನಿಯೋಜನೆ ಅಕ್ರಮವಾಗಿದ್ದು, ಅದನ್ನು ರದ್ದುಪಡಿಸುವಂತೆ ಸೂಚನೆ ನೀಡಿದ್ದರು. ಅಪರ ಆಯುಕ್ತರ ಸೂಚನೆ ಹಿನ್ನೆಲೆಯಲ್ಲಿ, ಕಾಸಿಂ ಸಂಕನೂರ ನಿಯೋಜನೆ ರದ್ದುಪಡಿಸುವಂತೆ ಡಿಡಿಪಿಐ ಅವರು ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ 15-6-2021 ರಂದು ಪತ್ರ ಬರೆದಿದ್ದರು.

ಸರಕಾರದ ವಿವಿಧ ಹಂತಗಳಲ್ಲಿ ಈ ಕುರಿತು ಪ್ರಕ್ರಿಯೆಗಳು ನಡೆದ ನಂತರ, ಈಗ ಶಿಕ್ಷಣ ಇಲಾಖೆಯ (ಪ್ರೌಢಶಿಕ್ಷಣ) ಸರಕಾರದ ಆಧೀನ ಕಾರ್ಯದರ್ಶಿಗಳು ಕಾಸಿಂ ಸಂಕನೂರ ನಿಯೋಜನೆ ರದ್ದುಪಡಿಸಿ ಆದೇಶ ಹೊರಡಿಸಿದ್ದಾರೆ. ಮುಂದಿನ ಸ್ಥಳ ನಿಯುಕ್ತಿಗಾಗಿ ಅಪರ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಕಲಬುರಗಿ ಇವರ ಕಚೇರಿಯಲ್ಲಿ ವರದಿ ಮಾಡಿಕೊಳ್ಳುಂತೆ ಕಾಸಿಂ ಸಂಕನೂರ್‌ಗೆ ಸೂಚಿಸಿದ್ದಾರೆ.

ಅಕ್ರಮ ಎಸಗಿದವರಿಗೆ ಶಿಕ್ಷೆ ಎಂದು?

ಕಾನೂನುಬಾಹಿರವಾಗಿ ಶಿಕ್ಷಕರನ್ನು ಬೋಧಕೇತರ ಕಾರ್ಯಗಳಿಗೆ ನಿಯೋಜಿಸಿದ್ದ ಪ್ರಭಾರಿ ಡಿಡಿಪಿಐ ಎಂ.ಎಸ್. ಬಸವರಾಜಯ್ಯಸ್ವಾಮಿ ಅವರ ವಿರುದ್ಧ ಇಲಾಖೆ ಶಿಸ್ತುಕ್ರಮ ಕೈಗೊಳ್ಳಬೇಕಿದೆ. ಇಡೀ ನಿಯೋಜನೆ ಪ್ರಕ್ರಿಯೆಯೇ ಕಾನೂನುಬಾಹಿರವಾಗಿರುವುದು ಸಾಬೀತಾಗಿರುವುದರಿಂದ, ಅಂಥದೊಂದು ಶಿಸ್ತುಕ್ರಮ ಇತರ ಅಧಿಕಾರಿಗಳಿಗೆ ಎಚ್ಚರಿಕೆಯ ಪಾಠವಾಗಬಲ್ಲುದು.

– ಚಾಮರಾಜ ಸವಡಿ | ಕೊಪ್ಪಳ

ಕಾಸಿಂ ಸಂಕನೂರ ಅಕ್ರಮ ನಿಯೋಜನೆಗೆ ಸಂಬಂಧಿಸಿದ ಈ ವರದಿಗಳನ್ನೂ ನೋಡಿ:

  1. ಶಿಕ್ಷಕರ ನಿಯೋಜನೆ ಎಂಬ ಕಾನೂನುಬಾಹಿರ ದಂಧೆ https://vijayaparva.com/?p=1627
  2. ಎಲ್ಲಾ ನಿಯೋಜಿತ ಶಿಕ್ಷಕರ ವಿವರ ಕೇಳಿದ ಆಯುಕ್ತ https://vijayaparva.com/?p=1756
  3. ಕಾಸಿಂ ಸಂಕನೂರ ನಿಯೋಜನೆ ರದ್ದತಿಗೆ ಡಿಡಿಪಿಐ ಪತ್ರ https://vijayaparva.com/?p=1773
  4. ಕಾಸಿಂ ಸಂಕನೂರ ನಿಯೋಜನೆ ರದ್ದತಿಗೆ ಚಾಲನೆ https://vijayaparva.com/?p=1786
0
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 604