ದಲಿತ ಯುವಕನಿಗೆ ಬೆದರಿಕೆ ಒಡ್ಡಿದ ಪ್ರಕರಣ | ಸಿಪಿಐ ಉದಯರವಿ ತಪ್ಪಿತಸ್ಥ: ವರದಿ

ವಿಜಯ ಪರ್ವ | ಕೊಪ್ಪಳ
ಕೊನೆಗೂ ನಿಷ್ಪಕ್ಷಪಾತ ವರದಿಯೊಂದು ಕೊಪ್ಪಳ ಜಿಲ್ಲೆಯ ಪೊಲೀಸ್ ಇಲಾಖೆಯಿಂದ ಬಂದಿದೆ. ಕೊಪ್ಪಳದ ದಲಿತ ಸಂಘಟಕ ಮಲ್ಲಿಕಾರ್ಜುನ್ ಪೂಜಾರ್ ಅವರಿಗೆ ದೂರವಾಣಿಯಲ್ಲಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಂಗಾವತಿ ಗ್ರಾಮೀಣ ಠಾಣೆಯ ಸಿಪಿಐ ಉದಯರವಿ ತಪ್ಪಿತಸ್ಥ ಎಂದು ಘೋಷಿಸಲಾಗಿದೆ. ಸದರಿ ಪ್ರಕರಣ ಕುರಿತು ವಿಜಯ ಪರ್ವ ವಿಸ್ತೃತವಾಗಿ ವರದಿ ಮಾಡಿತ್ತು.

ಇದೇ ಜೂನ್ 1 ಮಧ್ಯಾಹ್ನ 1.03 ಕ್ಕೆ ಮಲ್ಲಿಕಾರ್ಜುನ ಪೂಜಾರ್ ಅವರಿಗೆ ಕರೆ ಮಾಡಿದ್ದ ಉದಯರವಿ ಅವರು ತಮ್ಮ ಪರಿಚಯ ಹೇಳಿಕೊಂಡು, ಗಂಗಾವತಿಯ ಗ್ರಾಮೀಣ ಸಿಪಿಐ ಠಾಣೆಗೆ ಬರುವಂತೆ ಸೂಚಿಸುತ್ತಾರೆ. ತಮ್ಮ ವಿರುದ್ಧ ದೂರೇನಾದರೂ ದಾಖಲಾಗಿದೆಯಾ ಎಂದು ಮಲ್ಲಿಕಾರ್ಜುನ ಪೂಜಾರ ಪ್ರಶ್ನಿಸಿದಾಗ, ʼಪೊಲೀಸ್ ಆಫೀಸರ್ ಕರೆದರೆ ಬರಬೇಕಷ್ಟೇ. ಇಲ್ಲಿ ಬಾ. ಬಂದ ನಂತರ ವಿಷಯ ಗೊತ್ತಾಗುತ್ತದೆʼ ಎನ್ನುತ್ತಾರೆಯೇ ಹೊರತು ಯಾವ ಕಾರಣಕ್ಕೆ ಕರೆಸಲಾಗುತ್ತಿದೆ ಎಂಬುದನ್ನು ಹೇಳುವುದಿಲ್ಲ.

ಇಡೀ ದೂರವಾಣಿ ಕರೆಯನ್ನು ರೆಕಾರ್ಡ್ ಮಾಡಿಕೊಂಡಿದ್ದ ಮಲ್ಲಿಕಾರ್ಜುನ ಪೂಜಾರ, ತನ್ನ ವಿರುದ್ಧ ದೂರು ದಾಖಲಿಸುವ ಬೆದರಿಕೆ ಒಡ್ಡಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ್ ಅವರಿಗೆ ದೂರು ಸಲ್ಲಿಸಿದ್ದರು.

ಸದರಿ ದೂರಿನ ವಿಚಾರಣೆ ನಡೆಸಿರುವ ಗಂಗಾವತಿ ವಲಯದ ಡಿವೈ.ಎಸ್ಪಿ. ರುದ್ರೇಶ ಉಜ್ಜನಕೊಪ್ಪ ಅವರು, “ಸಿಪಿಐ ಉದಯರವಿ ಅವರು ಕರ್ತವ್ಯ ನಿರ್ವಹಣೆಯಲ್ಲಿ ಮೇಲಾಧಿಕಾರಿಗಳ ಆದೇಶ ಉಲ್ಲಂಘಿಸಿದ್ದಾರೆ. ಬೇಜವಾಬ್ದಾರಿತನ ಪ್ರದರ್ಶಿಸಿದ್ದು, ಉದ್ಧಟತನ ತೋರಿದ್ದಾರೆ. ಆದ್ದರಿಂದ ಇವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು” ಎಂದು 10-8-2021 ರಂದು ಹಿಂಬರಹ ನೀಡಿದ್ದಾರೆ.

ಈಗ ಚೆಂಡು ಕೊಪ್ಪಳ ಎಸ್ಪಿ ಟಿ. ಶ್ರೀಧರ ಅವರ ಮುಂದಿದೆ. ಡಿವೈ.ಎಸ್ಪಿ. ರುದ್ರೇಶ ಉಜ್ಜನಕೊಪ್ಪಳ ತೋರಿದ ನಿಷ್ಪಕ್ಷಪಾತತನವನ್ನು ಎಸ್ಪಿಯವರೂ ತೋರಿಸುತ್ತಾರೆಯೆ ಎಂಬ ವಿಷಯ ಕುತೂಹಲ ಮೂಡಿಸಿದೆ.
ಧನ್ಯವಾದ ಹೇಳಿದ ಮಲ್ಲಿಕಾರ್ಜುನ
“ಕೊನೆಗೂ ನನಗೆ ಪೋಲಿಸ್ ಇಲಾಖೆಯಿಂದ ನ್ಯಾಯ ಸಿಗುವ ವಿಶ್ವಾಸ ಬಂದಿದೆ. ನಮ್ಮ ಕೊಪ್ಪಳ ಜಿಲ್ಲಾ ಪೋಲಿಸ್ ಇಲಾಖೆಗೆ ಧನ್ಯವಾದಗಳು. ನನಗೆ ಫೋನ್ನಲ್ಲಿ ಧಮಕಿ ಹಾಕಿದ್ದ ಗಂಗಾವತಿ ಗ್ರಾಮೀಣ ಸಿಪಿಐ ಉದಯರವಿ ತಪ್ಪಿತಸ್ಥನೆಂದು ತನಿಖೆಯಲ್ಲಿ ಬಹಿರಂಗವಾಗಿದೆ. ಅವರ ವಿರುದ್ಧ ಸೂಕ್ತ ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ಪತ್ರ ಬರೆದು, ಕಾನೂನು ಎಲ್ಲರಿಗೂ ಒಂದೇ ಎಂದು ತೋರಿಸಿಕೊಟ್ಟ ತನಿಖಾಧಿಕಾರಿಗಳಿಗೆ ಧನ್ಯವಾದಗಳು. ಯಾವ ರೀತಿ ಶಿಕ್ಷೆ ಆಗುತ್ತದೆ ಎಂಬುದನ್ನು ಕಾದು ನೋಡುವೆ”.