ರಾಯರೆಡ್ಡಿ Vs ಹಾಲಪ್ಪ ಆಚಾರ್: ರಾಜಕೀಯ ಪ್ರಬುದ್ಧತೆ ತೋರಲು ಇದು ಸಕಾಲ

ಈ ಸುದ್ದಿ ಹಂಚಿಕೊಳ್ಳಿ:

ಇತ್ತೀಚೆಗೆ ಕೊಪ್ಪಳ ಜಿಲ್ಲೆ ಯಲಬುರ್ಗಾದ ಚಿಕ್ಕಮ್ಯಾಗೇರಿ ಗ್ರಾಮ ಹಾಗೂ ಯಲಬುರ್ಗಾ ಪಟ್ಟಣದಲ್ಲಿ ನಡೆದ ರಾಜ್ಯ ಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕ್ರಮವೊಂದರಲ್ಲಿ ಮಾಜಿ ಸಚಿವ ಬಸವರಾಜ ರಾಯರಡ್ಡಿ ಅವರು ನೀಡಿದ ಹೇಳಿಕೆಗಳು ಅನಗತ್ಯವಾಗಿ ವಿವಾದಕ್ಕೆ ಕಾರಣವಾಗಿವೆ.

ಬಣಜಿಗರ ಸಮಾವೇಶದಲ್ಲಿ ಮಾತನಾಡಿದ್ದ ಬಸವರಾಜ ರಾಯರಡ್ಡಿ ಅವರು, ʼದನ ಕಾಯೋರೆಲ್ಲ ಎಂಎಲ್‌ಎ, ಎಂಪಿ ಆಗಿದ್ದಾರೆʼ ಅಂದಿದ್ದರು. ಚಿಕ್ಕಮ್ಯಾಗೇರಿ ಕಾರ್ಯಕ್ರಮದಲ್ಲಿ ʼಆರು ಹಡೆದಾಕೆಯ ಮುಂದೆ…ʼ ಎಂದು ರೂಢಿಗತ ಗಾದೆ ಮಾತೊಂದನ್ನು ಉಲ್ಲೇಖಿಸಿದ್ದರು.

ರಾಯರೆಡ್ಡಿಯವರ ಈ ಎರಡೂ ಹೇಳಿಕೆಗಳು ಹಾಲಿ ಸಚಿವ ಹಾಲಪ್ಪ ಆಚಾರ್‌ ಅವರನ್ನು ಉದ್ದೇಶಿಸಿವೆ ಎಂಬ ಮಾತು ಈಗ ವಿವಾದದ ರೂಪಕ್ಕೆ ತಿರುಗಿದೆ.

ಈ ಕುರಿತಂತೆ ಬಸವರಾಜ ರಾಯರೆಡ್ಡಿ ಅವರು ಸಚಿವ ಹಾಲಪ್ಪ ಆಚಾರ್‌ ಅವರಿಗೇ ನೇರವಾಗಿ ಬರೆದ ಪತ್ರ ಲಭ್ಯವಾಗಿದೆ. ತಮ್ಮ ಹೇಳಿಕೆಯನ್ನು ಲೋಕಾಭಿರಾಮದ ಮಾತಿನ ಹಿನ್ನೆಲೆಯಲ್ಲಿ ಗ್ರಹಿಸಬೇಕೇ ಹೊರತು ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು ಎಂಬ ಇಂಗಿತವನ್ನು ರಾಯರೆಡ್ಡಿ ಅವರು ವ್ಯಕ್ತಪಡಿಸಿದ್ದಾರೆ.

ಆ ಪತ್ರವನ್ನು ಇಲ್ಲಿ ಯಥಾವತ್ತಾಗಿ ನೀಡಿದ್ದೇನೆ.

ಸಚಿವ ಹಾಲಪ್ಪ ಆಚಾರ್‌ ಅವರಿಗೆ ಸ್ಪಷ್ಟನೆ ನೀಡಿ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರು ಬರೆದಿರುವ ಪತ್ರ.

ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಮತ್ತು ಸಚಿವ ಹಾಲಪ್ಪ ಆಚಾರ್‌ ಇಬ್ಬರೂ ಪರಸ್ಪರ ರಾಜಕೀಯ ಎದುರಾಳಿಗಳು. ಯಲಬುರ್ಗಾ ಕ್ಷೇತ್ರದಲ್ಲಿ ಇವರಿಬ್ಬರ ನಡುವಿನ ಸ್ಪರ್ಧೆ ಸದಾ ತುರುಸಿನಿಂದ ಕೂಡಿರುತ್ತದೆ. ತಮ್ಮ ಸೋಲನ್ನು ಊಹಿಸಿರದಿದ್ದ ರಾಯರೆಡ್ಡಿ ಅವರು ಕೆಲ ಕಾಲ ಮಾನಸಿಕವಾಗಿ ಕುಗ್ಗಿ ಹೋಗಿದ್ದೂ ನಿಜ.

ಆ ದಿನಗಳಲ್ಲಿ ಕೂಡಾ ರಾಯರೆಡ್ಡಿ ಅವರು ಸಾಕಷ್ಟು ವೇದಿಕೆಗಳಲ್ಲಿ ಮಾತನಾಡಿದ್ದಾರೆ. ಆಗ ಶಾಸಕರಾಗಿದ್ದ ಹಾಲಪ್ಪ ಆಚಾರ್‌ ಅವರನ್ನು ಟೀಕಿಸಿದ್ದಾರೆ. ಆದರೆ, ಅವರ ಯಾವೊಂದು ಹೇಳಿಕೆಯೂ ವಿವಾದಾಸ್ಪದ ಅನಿಸಿರಲಿಲ್ಲ.

ಸಚಿವ ಹಾಲಪ್ಪ ಆಚಾರ್

ಯಾವಾಗ ಹಾಲಪ್ಪ ಆಚಾರ್‌ ಸಚಿವರಾದರೂ, ರಾಯರೆಡ್ಡಿ ಅವರ ಪ್ರತಿಯೊಂದು ಹೇಳಿಕೆಯನ್ನೂ ಕೆದಕಲಾಗುತ್ತಿದೆಯೇನೋ ಎಂಬ ಅನುಮಾನಗಳು ಮೂಡತೊಡಗಿವೆ. ಹಾಲಪ್ಪ ಆಚಾರ್‌ ಅವರಿಗೆ ಮಕ್ಕಳಾಗಿಲ್ಲ ಎಂಬುದನ್ನು ರಾಯರೆಡ್ಡಿ ಅವರು ʼಆರು ಹಡೆದಾಕೆಯ ಮುಂದೆ…ʼ ಎಂಬ ಹೇಳಿಕೆ ಮೂಲಕ ಆಡಿಕೊಂಡಿದ್ದಾರೆ ಎಂಬಂತೆ ಬಿಂಬಿಸಲಾಗುತ್ತಿದೆ. ಅದೇ ರೀತಿ, ದನ ಕಾಯೋರೆಲ್ಲ ಎಂಎಲ್‌ಎ, ಎಂಪಿ ಆಗಿದ್ದಾರೆ ಎಂಬ ಹೇಳಿಕೆಯನ್ನು ರೈತ ವಿರೋಧಿ ಎಂಬಂತೆ ತೋರಿಸಲಾಗುತ್ತಿದೆ.

ರಾಜಕೀಯದಲ್ಲಿ ಹೇಳಿಕೆ-ಪ್ರತಿ ಹೇಳಿಕೆಗಳು ಸಾಮಾನ್ಯ. ಅದೇ ರೀತಿ, ಆರೋಪ-ಪ್ರತ್ಯಾರೋಪಗಳೂ ಸಾಮಾನ್ಯ. ತಮ್ಮ ಹೇಳಿಕೆ ವೈಯಕ್ತಿಕವಾಗಿದ್ದಿಲ್ಲ ಎಂಬುದನ್ನು ರಾಯರೆಡ್ಡಿ ಅವರು ತಮ್ಮ ಈ ಪತ್ರದ ಮೂಲಕ ಸ್ಪಷ್ಟಪಡಿಸಿಯಾಗಿದೆ. ಆ ಮೂಲಕ ಅವರು ರಾಜಕೀಯ ಪ್ರಬುದ್ಧತೆಯನ್ನು ತೋರಿಸಿದ್ದಾರೆ. ಆದರೆ, ಹಾಲಪ್ಪ ಆಚಾರ್‌ ಅವರ ಸೋ ಕಾಲ್ಡ್‌ ಅಭಿಮಾನಿಗಳು ಹಾಗೂ ಯಲಬುರ್ಗಾ ಬಿಜೆಪಿ ಘಟಕ ಇನ್ನೂ ಖಂಡನೆಯಲ್ಲಿಯೇ ತೊಡಗಿದೆ.

ಎಲ್ಲರೂ ರಾಜಕೀಯವಾಗಿ ಪ್ರಬುದ್ಧರಾದಾಗ, ಇಂತಹ ಹೇಳಿಕೆಗಳ ಕೂದಲು ಸೀಳುವ ಕೆಲಸ ಬಿಟ್ಟು ಕ್ಷೇತ್ರದ ಅಭಿವೃದ್ಧಿಯ ಕುರಿತ ವಿಷಯಗಳ ಕುರಿತು ಮಾತನಾಡಲು ಸಾಧ್ಯವಾದೀತು. ಅಂತಹ ಪ್ರಬುದ್ಧತೆಯನ್ನು ನಮ್ಮ ನಾಯಕರು ಮತ್ತವರ ಹಿಂಬಾಲಕರು ತೋರಿಸಬೇಕಿದೆ.

ರಾಜಕೀಯದಲ್ಲಿ ಪ್ರಬುದ್ಧತೆ ಎಂಬುದು ಅಪರೂಪ. ತಮ್ಮ ಪತ್ರದ ಮೂಲಕ ಅಂತಹ ಪ್ರಬುದ್ಧತೆಯನ್ನು ಬಸವರಾಜ ರಾಯರೆಡ್ಡಿ ಅವರು ತೋರಿಸಿದ್ದಾರೆ. ಇದು ನಿಜಕ್ಕೂ ಅಭಿನಂದನಾರ್ಹ.

ಆರೋಗ್ಯಕರ ರಾಜಕಾರಣಕ್ಕೆ ಈ ನಡೆ ಕಾರಣವಾಗಲಿ ಎಂಬುದು ನನ್ನ ವೈಯಕ್ತಿಕ ಆಶಯ.

– ಚಾಮರಾಜ ಸವಡಿ | ಕೊಪ್ಪಳ

9886317901

0
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 2405