ಯಲಬುರ್ಗಾ ಸೀನಿಯರ್ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಲಂಚಾವತಾರ – ಭಾಗ 1

ಈ ಸುದ್ದಿ ಹಂಚಿಕೊಳ್ಳಿ:

ವಿಜಯಪರ್ವ ವಿಶೇಷ

ಕೊಪ್ಪಳ: ಜಿಲ್ಲೆಯ ಯಲಬುರ್ಗಾ ತಾಲೂಕಿನ ಸೀನಿಯರ್‌ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ. ಸೀನಿಯರ್‌ ಸಬ್‌ ರಿಜಿಸ್ಟ್ರಾರ್‌ ಆಗಿರುವ ರೆಹಮಾನ್‌ ಅವರನ್ನು ಡಿಟಿಪಿ ಆಪರೇಟರ್‌ ಬಸಣ್ಣ ಎಂಬಾತ ಕಚೇರಿಯಲ್ಲಿಯೇ ತರಾಟೆಗೆ ತೆಗೆದುಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

‌ಯಲಬುರ್ಗಾದ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ರೆಹಮಾನ್‌ ಹಾಗೂ ಡಿಟಿಪಿ ಆಪರೇಟರ್‌ ಬಸಣ್ಣ ನಡುವೆ ನಡೆದ ವಾಗ್ವಾದ ಹಾಗೂ ಆರೋಪ ಮತ್ತು ಪ್ರತ್ಯಾರೋಪಗಳು ವಿಡಿಯೊದಲ್ಲಿ ದಾಖಲಾಗಿವೆ. ಕಚೇರಿಗೆ ಕೆಲಸದ ಮೇಲೆ ಹೋಗಿದ್ದ ಆರ್‌ಟಿಐ ಕಾರ್ಯಕರ್ತ ಹಾಗೂ ಮಾನವ ಹಕ್ಕುಗಳ ಹೋರಾಟಗಾರ ಎಚ್‌.ಎಸ್.‌ ಲಿಂಗದಳ್ಳಿ ಎಂಬುವವರು ಇಡೀ ಪ್ರಹಸನವನ್ನು ವಿಡಿಯೊ ಮಾಡಿದ್ದು, ಅದರ ಪ್ರತಿ ʼವಿಜಯ ಪರ್ವʼಕ್ಕೆ ಲಭ್ಯವಾಗಿದೆ.

ಸಿಬ್ಬಂದಿಯಿಂದಲೇ ಖರ್ಚು:

ಲಂಚ ಕೊಡದ ಕಾರಣಕ್ಕೆ ತನ್ನನ್ನು ಕೆಲಸದಿಂದ ತೆಗೆಯಲು ಸೀನಿಯರ್‌ ಸಬ್‌ ರಿಜಿಸ್ಟ್ರಾರ್‌ ಪ್ರಯತ್ನಿಸುತ್ತಿದ್ದಾರೆ ಎಂದು ಡಿಟಿಪಿ ಆಪರೇಟರ್‌ ಬಸಣ್ಣ ಬಹಿರಂಗವಾಗಿ ಆರೋಪಿಸುವುದು ವಿಡಿಯೊದಲ್ಲಿದೆ. ಕಚೇರಿಯ ಡಿಟಿಪಿ ಕೆಲಸವನ್ನು ಹೊರಗುತ್ತಿಗೆ ನೀಡಲಾಗಿದೆ. ಮೂಲಸೌಕರ್ಯಗಳನ್ನು ಸಬ್‌ ರಿಜಿಸ್ಟ್ರಾರ್‌ ಕಚೇರಿಯೇ ಒದಗಿಸಬೇಕು. ಆದರೆ, ʼರೆಹಮಾನ್‌ ಅವರು ಯಾವ ಸೌಲಭ್ಯಗಳನ್ನೂ ಒದಗಿಸಿಲ್ಲ. ಕಂಪ್ಯೂಟರ್‌, ಪ್ರಿಂಟರ್‌ ಮುಂತಾದ ಎಲ್ಲವನ್ನೂ ಹೊರಗುತ್ತಿಗೆ ಸಿಬ್ಬಂದಿಯೇ ಹೊಂದಿಸಿಕೊಳ್ಳಬೇಕಿದೆ. ಹಾಗೆ ಮಾಡದಿದ್ದರೆ, ಬೇರೆ ಸಿಬ್ಬಂದಿಯನ್ನು ತರುವ ಬೆದರಿಕೆ ಒಡ್ಡುವ ಮೂಲಕ ಕಿರುಕುಳ ನೀಡುತ್ತಿದ್ದಾರೆʼ ಎಂಬುದು ಅಲ್ಲಿರುವ ಬಹುತೇಕ ಸಿಬ್ಬಂದಿಯ ಆರೋಪ.

ಲಂಚ ಕೊಟ್ಟರೆ ಮಾತ್ರ ಸಂಬಳ:

ತಮಗೆ ಸಂಬಳ ಬರುವುದೇ ಆರು ತಿಂಗಳಿಗೆ ಒಮ್ಮೆ. ಅದೂ ರೆಹಮಾನ್‌ ಅವರು ಹೇಳಿದಂತೆ ಕೇಳುತ್ತಿದ್ದರೆ ಮಾತ್ರ. ಅದರಲ್ಲಿಯೂ ರೂ.5,ooo ಲಂಚ ಕೇಳುತ್ತಿದ್ದಾರೆ. ಇದರ ಜೊತೆಗೆ ಪ್ರಿಂಟರ್‌ ಗೆ ಬೇಕಾದ ಕಾರ್ಟ್ರಿಜ್‌ ಮುಂತಾದವನ್ನು ನಾವೇ ತರಬೇಕು. ಇದಕ್ಕೆಲ್ಲ ಖರ್ಚು ಮಾಡಿದರೆ ನಮಗೆ ಉಳಿಯುವುದಾದರೂ ಏನು? ಅಲ್ಲದೇ, ತಮ್ಮ ಅಕ್ರಮ ಕೆಲಸಗಳಿಗೆ ಸಹಕರಿಸದಿದ್ದರೆ, ರೆಹಮಾನ್‌ ಅವರು ಕಿರುಕುಳ ನೀಡುತ್ತಾರೆ. ಕೆಲಸದಿಂದ ತೆಗೆಯುವ ಬೆದರಿಕೆ ಹಾಕುತ್ತಾರೆ ಎಂದು ಸಿಬ್ಬಂದಿ ಆರೋಪಿಸುತ್ತಾರೆ.

ವಿಡಿಯೊದಲ್ಲಿ ಎಲ್ಲವೂ ಬಹಿರಂಗ:

ಈ ಎಲ್ಲ ಆರೋಪಗಳೂ ವಿಡಿಯೋದಲ್ಲಿ ದಾಖಲಾಗಿವೆ. ರೆಹಮಾನ್‌ ಏನೇನು ಅಕ್ರಮ ಮಾಡುತ್ತಾರೆ ಎಂಬುದನ್ನು ಡಿಟಿಪಿ ಆಪರೇಟರ್‌ ಬಸಣ್ಣ ಅವರ ಮುಂದೆಯೇ ಕೂಗಾಡಿ ಬಹಿರಂಗಪಡಿಸಿರುವ ದೃಶ್ಯಗಳು ಅದರಲ್ಲಿವೆ. ಯಲಬುರ್ಗಾ ಸೀನಿಯರ್‌ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ನಡೆಯುತ್ತಿರುವ ಇಂತಹ ಹಲವಾರು ಅಕ್ರಮಗಳು ಈಗ ಒಂದೊಂದಾಗಿ ಹೊರಬೀಳುತ್ತಿವೆ.

ಈ ಕುರಿತು ಸೀನಿಯರ್‌ ಸಬ್‌ ರಿಜಿಸ್ಟ್ರಾರ್‌ ಅವರ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಿದರೂ, ಅವರು ಪ್ರತಿಕ್ರಿಯೆ ನೀಡಲಿಲ್ಲ.

– ಚಾಮರಾಜ ಸವಡಿ | ಕೊಪ್ಪಳ

+1
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 1634