ಕರ್ನಾಟಕ ರಾಜ್ಯ ಸರಕಾರಿ ಗ್ರೇಡ್-‌1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಚುನಾವಣೆಯೇ ಅಸಿಂಧು: ದೂರು ಸಲ್ಲಿಕೆ

ಈ ಸುದ್ದಿ ಹಂಚಿಕೊಳ್ಳಿ:

ಸಂಘದ ಚುನಾವಣೆಯೇ ಅಸಿಂಧು: ದೂರು ಸಲ್ಲಿಕೆ

ವಿಜಯ ಪರ್ವ ವಿಶೇಷ | ಕೊಪ್ಪಳ

2019-2024ನೇ ಸಾಲಿಗೆಂದು ಕರ್ನಾಟಕ ರಾಜ್ಯ ಸರಕಾರಿ ಗ್ರೇಡ್-‌1 ದೈಹಿಕ ಶಿಕ್ಷಣ ಶಿಕ್ಷಕರ ಸಂಘ (ರಿ) ತನ್ನ ಜಿಲ್ಲೆ ಮತ್ತು ತಾಲೂಕು ಘಟಕಗಳಿಗೆ ನಡೆದಿರುವ ಚುನಾವಣೆ ಅಸಿಂಧು ಎಂದು ಘೋಷಿಸುವಂತೆ ಸಂಬಂಧಿಸಿದ ಇಲಾಖೆಗಳಿಗೆ ದೂರು ಸಲ್ಲಿಕೆಯಾಗಿದೆ. ಇದರಿಂದಾಗಿ, ಈಗ ನೇಮಕವಾಗಿರುವ ರಾಜ್ಯ, ಜಿಲ್ಲೆ ಮತ್ತು ತಾಲೂಕು ಪದಾಧಿಕಾರಿಗಳು ತಮ್ಮ ಸ್ಥಾನ ಕಳೆದುಕೊಳ್ಳುವ ಭೀತಿ ಎದುರಾಗಿದೆ.

ದೃಷ್ಟಿವಿಚೇತನ ಚುನಾವಣಾಧಿಕಾರಿ

ಶೇಕಡಾ 75 ರಷ್ಟು ದೃಷ್ಟಿ ವೈಕಲ್ಯತೆ ಹೊಂದಿರುವ ಪಿ. ರವಿಶಂಕರ್‌ ಹೊರಡಿಸಿರುವ ಚುನಾವಣಾ ಸೂಚನೆ.

ಕರ್ನಾಟಕ ರಾಜ್ಯ ಸರಕಾರಿ ಗ್ರೇಡ್-‌1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಚುನಾವಣಾಧಿಕಾರಿಯಾಗಿ ನೇಮಕವಾಗಿದ್ದ ವ್ಯಕ್ತಿಯೇ ದೃಷ್ಟಿ ವಿಚೇತನರಾಗಿದ್ದಾರೆ. ಅವರ ದೃಷ್ಟಿ ವೈಕಲ್ಯತೆ ಪ್ರಮಾಣ ಶೇಕಡಾ 75 ರಷ್ಟಿದೆ ಎಂದು ಬೆಂಗಳೂರಿನ ಕೆ.ಸಿ. ಜನರಲ್‌ ಆಸ್ಪತ್ರೆ ಅಧಿಕೃತವಾಗಿ ಪ್ರಮಾಣಪತ್ರವನ್ನೂ ನೀಡಿದೆ. ಇಷ್ಟೊಂದು ಪ್ರಮಾಣದ ವೈಕಲ್ಯತೆ ಹೊಂದಿರುವ ವ್ಯಕ್ತಿ ಚುನಾವಣಾ ಕರ್ತವ್ಯವವನ್ನು ನಿರ್ವಹಿಸುವಂತಿಲ್ಲ ಎಂದು ಚುನಾವಣಾ ಆಯೋಗದ ಸಂಹಿತೆ ಹೇಳುತ್ತದೆ. ಈ ಹಿನ್ನೆಲೆಯಲ್ಲಿ, ಇವರು ಚುನಾವಣಾಧಿಕಾರಿಯಾಗಿ ನಡೆಸಿರುವ ಕರ್ನಾಟಕ ರಾಜ್ಯ ಸರಕಾರಿ ಗ್ರೇಡ್-‌1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಎಲ್ಲಾ ಘಟಕಗಳ ಚುನಾವಣೆಗಳನ್ನು ಅಸಿಂಧುವಾಗುವ ಅಪಾಯ ಈಗ ತಲೆದೋರಿದೆ.

ಅನ್ನಪೂರ್ಣ ಅಸ್ಕಿ ದೂರು

ಕರ್ನಾಟಕ ರಾಜ್ಯ ಸರಕಾರಿ ಗ್ರೇಡ್-‌1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಚುನಾವಣೆಗೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲಾ ಸಹಕಾರಿ ಉಪನಿಬಂಧಕರು ಹಾಗೂ ಇತರ ಇಲಾಖೆಗಳಿಗೆ ದೂರು ಸಲ್ಲಿಸಿರುವ ನಗರದ ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರೌಢಶಿಕ್ಷಣ ವಿಭಾಗದ ದೈಹಿಕ ಶಿಕ್ಷಕಿ ಅನ್ನಪೂರ್ಣ ಅಸ್ಕಿ ಅವರು, 2019-24ನೇ ಸಾಲಿಗೆ ಘೋಷಿತವಾದ ಚುನಾವಣೆ ಅಸಿಂಧುವಾಗುತ್ತದೆ ಎಂದು ಗಮನ ಸೆಳೆದಿದ್ದಾರೆ.

ಪಿ. ರವಿಶಂಕರ್‌ ಅವರು ಶೇಕಡಾ 75 ರಷ್ಟು ದೃಷ್ಟಿ ವೈಕಲ್ಯತೆ ಹೊಂದಿರುವುದಾಗಿ ಕೆ.ಸಿ. ಜನರಲ್‌ ಆಸ್ಪತ್ರೆ ನೀಡಿರುವ ಪ್ರಮಾಣಪತ್ರ.

ಚುನಾವಣಾ ಆಯೋಗದ ನಿಯಮಾವಳಿಗಳ ಪ್ರಕಾರ ಗಂಭೀರ ಪ್ರಮಾಣದ ವೈಕಲ್ಯತೆ ಹೊಂದಿರುವ ವ್ಯಕ್ತಿ ಚುನಾವಣಾಧಿಕಾರಿಯಾಗುವಂತಿಲ್ಲ. ಆದರೆ, ಕರ್ನಾಟಕ ರಾಜ್ಯ ಸರಕಾರಿ ಗ್ರೇಡ್-‌1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ 2019-24 ನೇ ಸಾಲಿನ ಎಲ್ಲಾ ಹಂತದ ಚುನಾವಣೆಗಳನ್ನು ಶೇಕಡಾ 75 ರಷ್ಟು ದೃಷ್ಟಿ ವೈಕಲ್ಯ ಹೊಂದಿರುವ ಪಿ. ರವಿಶಂಕರ್‌ ನಡೆಸಿದ್ದಾರೆ. ಹೀಗಾಗಿ, ಈ ಎಲ್ಲಾ ಹಂತದ ಚುನಾವಣೆಗಳು ಅಸಿಂಧುವಾಗುತ್ತವೆ ಎಂಬ ಅಂಶವನ್ನು ಅವರು ಪ್ರಸ್ತಾಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಸದರಿ ಅವಧಿಗೆ ನಡೆದ ಚುನಾವಣೆಯ ಸಿಂಧುತ್ವವನ್ನು ವಿಚಾರಣೆಗೆ ಒಳಪಡಿಸಬೇಕು. ಈಗ ಘೋಷಣೆಯಾಗಿರುವ ಪದಾಧಿಕಾರಿಗಳ ಆಯ್ಕೆಯನ್ನು ರದ್ದು ಮಾಡಬೇಕು. ಈ ದೂರು ಇತ್ಯರ್ಥವಾಗುವವರೆಗೆ, ಅವರು ತಮ್ಮ ಚುನಾಯಿತ ಹುದ್ದೆಯನ್ನು ಘೋಷಿಸಿಕೊಳ್ಳಬಾರದು ಎಂದು ಅನ್ನಪೂರ್ಣ ಅಸ್ಕಿ ಅವರು ಆಗ್ರಹಿಸಿದ್ದಾರೆ.

ಚುನಾಯಿತ ಪ್ರತಿನಿಧಿಗಳಲ್ಲ

ಈ ಮಧ್ಯೆ ಹೊಸದೊಂದು ವಿವಾದವನ್ನೂ ಅನ್ನಪೂರ್ಣ ಅಸ್ಕಿ ಅವರು ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ತಂದಿದ್ದಾರೆ. ಕರ್ನಾಟಕ ರಾಜ್ಯ ಸರಕಾರಿ ಗ್ರೇಡ್-‌1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಚುನಾವಣಾಧಿಕಾರಿಯಾಗಿ ನಾನು ಕೆಲಸ ಮಾಡಿಲ್ಲ. ನನ್ನ ಸಹಿಯನ್ನು ದುರುಪಯೋಗಪಡಿಸಿಕೊಂಡು,  ಜಿಲ್ಲಾ ಘಟಕದ ಚುನಾವಣೆಗೆ ನನ್ನನ್ನು ಚುನಾವಣಾಧಿಕಾರಿ ಎಂಬಂತೆ ಬಿಂಬಿಸಿಲಾಗಿದೆ ಎಂದು ಶೇಖರಯ್ಯ ಹಿರೇಮಠ ಎಂಬ ಶಿಕ್ಷಕರು ಬರೆದಿರುವ ಪತ್ರವನ್ನೂ ಅವರು ದಾಖಲೆಯಾಗಿ ಉಲ್ಲೇಖಿಸಿದ್ದಾರೆ.

ಕರ್ನಾಟಕ ರಾಜ್ಯ ಸರಕಾರಿ ಗ್ರೇಡ್-1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕೊಪ್ಪಳ ಜಿಲ್ಲಾ ಘಟಕದ ಚುನಾವಣಾಧಿಕಾರಿಯಾಗಿ ತಾವು ಕೆಲಸ ಮಾಡಿಲ್ಲ ಎಂದು ಶೇಖರಯ್ಯ ಹಿರೇಮಠ ಅವರು ಬರೆದಿರುವ ಪತ್ರ.

ʼಮೇಲ್ಕಾಣಿಸಿದ ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರಕಾರಿ ಗ್ರೇಡ್-‌1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕೊಪ್ಪಳ ಜಿಲ್ಲಾ ಮತ್ತು ತಾಲೂಕು ಘಟಕಗಳ ಈಗಿನ ಪ್ರತಿನಿಧಿಗಳ ಆಯ್ಕೆ ಅಸಿಂಧುವಾಗುತ್ತದೆ. ಆದ್ದರಿಂದ ಅವರನ್ನು ಹುದ್ದೆಯ ಆಧಾರದ ಮೇಲೆ ಯಾವುದೇ ಸಭೆ-ಸಮಾರಂಭಗಳ ವೇದಿಕೆಗೆ ಆಹ್ವಾನಿಸಬಾರದುʼ ಎಂದು ಸಂಬಂಧಿಸಿದ ಶಿಕ್ಷಕರು ಮತ್ತು ನೌಕರರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗೆ ಪತ್ರ ಕೂಡಾ ಬರೆದಿದ್ದಾರೆ.

ಕರ್ನಾಟಕ ರಾಜ್ಯ ಸರಕಾರಿ ಗ್ರೇಡ್-1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕೊಪ್ಪಳ ಜಿಲ್ಲಾ ಮತ್ತು ತಾಲೂಕಾ ಘಟಕಗಳ ಪದಾಧಿಕಾರಿಗಳ ಆಯ್ಕೆ ಅಸಿಂಧುವಾಗಿದ್ದು, ಅವರನ್ನು ವೇದಿಕೆಗೆ ಆಹ್ವಾನಿಸಬಾರದು ಎಂದು ಅನ್ನಪೂರ್ಣ ಅಸ್ಕಿ ಬರೆದ ಪತ್ರ.

ಇದರಿಂದಾಗಿ, ದಿನಾಂಕ 28-11-2021 ರಂದು ಕೊಪ್ಪಳದಲ್ಲಿ ನಡೆಯಲಿರುವ ತಾಲೂಕಾ ಪ್ರೌಢಶಾಲಾ ನೌಕರರ ಪತ್ತಿನ ಸಹಕಾರ ಸಂಘದ 22 ನೇ ವಾರ್ಷಿಕ ಸಮ್ಮೇಳನಕ್ಕೆ ಆಹ್ವಾನಿತವಾಗಿರುವ ಕರ್ನಾಟಕ ರಾಜ್ಯ ಸರಕಾರಿ ಗ್ರೇಡ್-‌1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವಿಠ್ಠಲ ಬೈಲವಾಡ ಮತ್ತು ಕೊಪ್ಪಳ ತಾಲೂಕು ಘಟಕದ ಅಧ್ಯಕ್ಷ ವೀರಭದ್ರಯ್ಯ ಪೂಜೇರ ಅವರು ಸೇರಿದಂತೆ ಜಿಲ್ಲಾ ಮತ್ತು ತಾಲೂಕಾ ಘಟಕಗಳ ಇತರ ಪದಾಧಿಕಾರಿಗಳು ಮುಜುಗರಕ್ಕೆ ಸಿಲುಕಿದ್ದಾರೆ.

ಅನ್ನಪೂರ್ಣ ಅಸ್ಕಿ ಅವರು ಚುನಾವಣಾ ಆಯೋಗದ ನಿಯಮಾವಳಿಗಳನ್ನು ಉಲ್ಲೇಖಿಸಿದ್ದಲ್ಲದೇ, ಕರ್ನಾಟಕ ರಾಜ್ಯ ಸರಕಾರಿ ಗ್ರೇಡ್-‌1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುವ ಪಿ. ರವಿಶಂಕರ್‌ ಅವರ ದೃಷ್ಟಿ ವೈಕಲ್ಯತೆಯ ಪ್ರಮಾಣಪತ್ರಗಳನ್ನೂ ಪೂರಕ ದಾಖಲೆಯಾಗಿ ಸಲ್ಲಿಸಿದ್ದಾರೆ.

ಅನ್ನಪೂರ್ಣ ಅಸ್ಕಿ ಅವರ ಈ ದೂರು ಶಿಕ್ಷಕ ವಲಯದಲ್ಲಿ ಭಾರೀ ಸಂಚಲನೆ ಮೂಡಿಸಿದೆ. ಅವರು ಸಲ್ಲಿಸಿರುವ ದೂರಿನ ವಿಚಾರಣೆ ಮತ್ತು ಅದರ ಪರಿಣಾಮ ಏನಾಗಬಹುದು ಎಂಬುದರ ಕುರಿತು ಚರ್ಚೆಯನ್ನು ಹುಟ್ಟುಹಾಕಿದೆ.

– ಚಾಮರಾಜ ಸವಡಿ | ಕೊಪ್ಪಳ

+1
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 2118