ಶಿಕ್ಷಕರ ನೇರ ನೇಮಕಾತಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ವಿರೋಧ

ಈ ಸುದ್ದಿ ಹಂಚಿಕೊಳ್ಳಿ:
ವಿಜಯ ಪರ್ವ ವಿಶೇಷ

ರಾಜ್ಯ ಸರಕಾರ ಘೋಷಿಸಿರುವ 15,000 ಶಿಕ್ಷಕರ ನೇಮಕದ ಕೆಲವು ನಿಯಮಗಳಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ವಿರೋಧ ವ್ಯಕ್ತಪಡಿಸಿದೆ.

ಈ ಕುರಿತು ಸಂಘ ಇಂದು (14-12-2021) ನೀಡಿರುವ ಪತ್ರಿಕಾ ಪ್ರಕಟಣೆಯಲ್ಲಿ, ತನ್ನ ವಿರೋಧವನ್ನು ಈ ರೀತಿ ಹೇಳಿದೆ:

ಪ್ರಾಥಮಿಕ ಶಾಲಾ ಶಿಕ್ಷಕರ ನೇರ ನೇಮಕ ಪ್ರಮಾಣಕ್ಕೆ ಸಂಘದ ವಿರೋಧ-1

ದಿನಾಂಕ: 10-12-2021 ರಂದು ರಾಜ್ಯ ಸರ್ಕಾರ ಪ್ರಕಟಿಸಿರುವ ಶಿಕ್ಷಕರ ನೇಮಕಾತಿ ಅಂತಿಮ ನಿಯಮಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದು, ತಕ್ಷಣ ಸೂಕ್ತ ಬದಲಾವಣೆಗಾಗಿ ಆಗ್ರಹಿಸುತ್ತಾ ಕೆಳಗಿನ ಬದಲಾವಣೆಗಾಗಿ ತೀವ್ರ ಒತ್ತಾಯಿಸುತ್ತಾ ಸರ್ಕಾರ ಸ್ಪಂದಿಸದಿದ್ದರೆ ಅನಿವಾರ್ಯವಾಗಿ ಶಿಕ್ಷಕರ ಸಂಘಟನೆ ಹೋರಾಟದ ದಾರಿಯನ್ನು ಹಿಡಿಯಬೇಕಾಗುತ್ತದೆ

ಶಿಕ್ಷಕರ ಸಂಘದ ಸ್ಪಷ್ಟ ಎಚ್ಚರಿಕೆ

ನಿಯಮ ಕ್ರಮಾಂಕ: 66 ಎ  

ಅಂತಿಮ ಕರಡು ನಿಯಮ: 1. ಶೇ. 67 ರಷ್ಟು ನೇರ ನೇಮಕಾತಿ ಮತ್ತು ಶೇ. 33 ರಷ್ಟು ಸೇವಾ ನಿರತ ನೇಮಕಾತಿ (ಬಡ್ತಿ) 

ಅಂತಿಮ ಕರಡು ನಿಯಮಕ್ಕೆ ತರಬೇಕಾದ ತಿದ್ದುಪಡಿಗಳು:    1. ಇಡಿ 94 ಪಿಬಿಎಸ್ 2018 (ಭಾಗ-3) ದಿನಾಂಕ:  10-12-2021 ರಂದು ಪ್ರಕಟಿಸಿರುವ ವೃಂದ ಮತ್ತು ನೇಮಕಾತಿ ಬಡ್ತಿ ನಿಯಮ ಅನ್ವಯವಾಗುವ ಪೂರ್ವದಲ್ಲಿ (ಕೆ.ಇ.ಡಿ. ಎಸ್(ಡಿ.ಪಿ.ಐ) (ನೇಮಕಾತಿ) ನಿಯಮಗಳು 1967 ರಿಂದ  ಶಿಕ್ಷಣ ಇಲಾಖಾ ನೇಮಕಾತಿ  ನಿಯಮ)  ನೇಮಕಾತಿ ಹೊಂದಿದ ಎಲ್ಲಾ ಪಾಥಮಿಕ ಶಾಲಾ ಶಿಕ್ಷಕರನ್ನು 1-7 ವೃಂದದಲ್ಲಿ ಉಳಿಸಿಕೊಂಡು, ಸೇವಾನಿರತ ಪದವೀಧರ ಶಿಕ್ಷಕರನ್ನು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರೆಂದು ಪರಿಗಣಿಸುವುದು ಪದವೀಧರ ಶಿಕ್ಷಕರ ವೇತನ ಶ್ರೇಣಿಯನ್ನು ನಿಗದಿಗೊಳಿಸುವುದು.     

ಪ್ರಾಥಮಿಕ ಶಾಲಾ ಶಿಕ್ಷಕರ ನೇರ ನೇಮಕ ಪ್ರಮಾಣಕ್ಕೆ ಸಂಘದ ವಿರೋಧ-2

2. ನಂತರ ನೇರ ನೇಮಕಾತಿಗೆ 25% ಮತ್ತು ಸೇವಾನಿರತ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದಿಂದ ಬಡ್ತಿಗಾಗಿ 75% ಸೇವಾ ಜೇಷ್ಠತೆಯೊಂದಿಗೆ 6 ರಿಂದ 8ಕ್ಕೆ ಪರಿಗಣಿಸುವುದು. ಬಡ್ತಿ ಎಂಬ ಪದವನ್ನು ಸಂಪೂರ್ಣವಾಗಿ ಕೈಬಿಟ್ಟುಪದವಿ ಪಡೆದ ಶಿಕ್ಷಕರುಗಳನ್ನು ಪದವೀಧರ ಶಿಕ್ಷಕರೆಂದು ಪರಿಗಣಿಸುವುದು

ಅಂತಿಮ ಕರಡು ನಿಯಮ 2: ಸೇವಾನಿರತ ಶಿಕ್ಷಕರ ಪರೀಕ್ಷೆಗೆ ಸಂಬಂಧಿಸಿದಂತೆ ಪದವಿಯ ಜೊತೆಗೆ ಭಾರತ ಸರಕಾರ ಮತ್ತು ಕರ್ನಾಟಕ ಸರಕಾರ ಪದವಿಗೆ ತತ್ಸಮಾನ ಎಂದು ನಿಗದಿಪಡಿಸಿದ ಎಲ್ಲಾ ವಿದ್ಯಾರ್ಹತೆಗಳನ್ನು ಸೇವಾನಿರತ ಶಿಕ್ಷಕರಿಗೆ ಅನ್ವಯಿಸುವುದು. ಹಾಗೂ ಶಿಕ್ಷಣ ವಿಷಯದಲ್ಲಿ 07/08/2017 ರ ಪೂರ್ವದಲ್ಲಿ ನಿಗದಿಪಡಿಸಿದ ಎಲ್ಲಾ ವಿದ್ಯಾರ್ಹತೆಗಳನ್ನು ಪರಿಗಣಿಸುವುದು ಮತ್ತು ಶಿಕ್ಷಕರ ಅರ್ಹತಾ ಪರೀಕ್ಷೆಯ ಮಾನದಂಡವನ್ನು ರದ್ದುಪಡಿಸುವುದು         

3. ಸ್ಪರ್ಧಾತ್ಮಕ ಪರೀಕ್ಷೆ: ಸೇವಾ ಅನುಭವ ಹಾಗೂ ಪದವಿಯನ್ನು ಪರಿಗಣಿಸಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ರದ್ದುಗೊಳಿಸುವುದು ಶಿಕ್ಷಕರಿಗೆ ಸೃಜನಾತ್ಮಕ ತರಬೇತಿಗಳನ್ನು ನೀಡುವುದು. (Innovative Trainings)

ನಿಯಮಕ್ಕೆ ಸೇರಿಸಬೇಕಾದ ಇತರೆ ವಿಷಯಗಳು:

1. 1 ರಿಂದ 5ನೇ ತರಗತಿಗೆ ಮುಖ್ಯ ಗುರುಗಳ ಹುದ್ದೆಯನ್ನು ಸೃಜಿಸಿ ಮೊದಲನೇ ಬಡ್ತಿಯನ್ನು ಉಳಿದಂತೆ 6 ರಿಂದ 8ಕ್ಕೆ ಪದವೀಧರೇತರ ಮುಖ್ಯಗುರುಗಳ ಹುದ್ದೆಯನ್ನು ಸೃಜಿಸಿ ಪ್ರತ್ಯೇಕ ವೇತನ ಶ್ರೇಣಿ ನಿಗದಿಗೊಳಿಸಿ ಸೇವಾ ಜೇಷ್ಠತೆಯೊಂದಿಗೆ ಮುಖ್ಯಗುರುಗಳಾಗಿ ಮೊದಲ ಹಾಗೂ ಎರಡನೇ ಹಂತದ ಬಡ್ತಿಯನ್ನು ನೀಡುವ ಕುರಿತು ನಿಯಮಗಳಲ್ಲಿ ಅವಕಾಶ ಕಲ್ಪಿಸುವುದು.

2. 2017 ರ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ 1-7, 8 ನೇ ತರಗತಿ ಬೋಧಿಸುತ್ತಿರುವ ದೈಹಿಕ ಶಿಕ್ಷಣ ಶಿಕ್ಷಕರಿಗೆ ಸಂಬಂಧಿಸಿದಂತೆ ಯಾವುದೇ ನಿಯಮ ಇಲ್ಲದೇ ಇರುವುದರಿಂದ ಪಸ್ತುತ ತಿದ್ದುಪಡಿಯಲ್ಲಿ ಸೇವಾನಿರತ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಿಗೆ ಪ್ರತ್ಯೇಕ ವೃಂದವನ್ನು ಸೃಜಿಸಿ, ಮೂಲ ವೇತನವನ್ನು ನಿಗದಿಗೊಳಿಸಿ ಅವಕಾಶ ಕಲ್ಪಿಸುವುದು.

3. 2002 ಕ್ಕಿಂತ ಪೂರ್ವದಲ್ಲಿ ನೇಮಕವಾದ ಎಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಕೇವಲ ಕನ್ನಡ ಸಾಮಾನ್ಯ ಶಿಕ್ಷಕರೆಂದು ಪರಿಗಣಿಸಿದ್ದು, ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡಿದ ಪಿಎಸ್‌ಟಿ ಶಿಕ್ಷಕರನ್ನು ಕನ್ನಡ ವಿಜ್ಞಾನ ಶಿಕ್ಷಕರೆಂದು ಹಾಗೂ ಪಿಯುಸಿಯಲ್ಲಿ ಆಂಗ್ಲ ವಿಷಯವನ್ನು ದ್ವಿತೀಯ ಭಾಷೆಯಾಗಿ ವ್ಯಾಸಂಗ ಮಾಡಿ 50 ಗಳಿಸಿದ ಪಿಎಸ್‌ಟಿ ಶಿಕ್ಷಕರನ್ನು ಕನ್ನಡ, ಇಂಗ್ಲಿಷ್ ಶಿಕ್ಷಕರೆಂದು ಪುನರ್ ಪದನಾಮೀಕರಿಸುವುದು.

‌4. ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಹಿಂದಿ ಶಿಕ್ಷಕರನ್ನು 1 ರಿಂದ 5 ವರ್ಗಗಳಿಗೆ, ಅಂದರೆ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಸೇರಿಸಿರುವುದು ಸಂಪೂರ್ಣ ಅವೈಜ್ಞಾನಿಕ. ಏಕೆಂದರೆ ಹಿಂದಿ ವಿಷಯದ ಕೆಲಸ ಪ್ರಾರಂಭವಾಗುವುದೇ 6 ನೇ ತರಗತಿಯಿಂದ. ಆದುದರಿಂದ ಅವರನ್ನು ಪದವಿಯಲ್ಲಿ ಹಿಂದಿ ವಿಷಯವನ್ನು ಐಚ್ಛಿಕವಾಗಿ ಅಧ್ಯಯನ ಮಾಡಿದ್ದರೆ 6 ರಿಂದ 8 ನೇ ತರಗತಿಗಳಿಗೆ ವಿಲೀನ ಮಾಡುವುದು. ಪದವಿ ಪಡೆಯದ ಉಳಿದ ಹಿಂದಿ ಶಿಕ್ಷಕರಿಗೆ ಹಿಂದಿ ವಿಷಯದೊಂದಿಗೆ ಪದವಿ ಪಡೆಯಲು ಸಮಯವಕಾಶ ನೀಡುವುದು.

5. ಒಂದು ವೇಳೆ ಶಾಲೆಯಲ್ಲಿ ಜಿಪಿಟಿ ಅರ್ಹತೆ ಹೊಂದಿರುವ ಪಿಎಸ್‌ಟಿ ಶಿಕ್ಷಕರು ಇದ್ದರೆ ಹೆಚ್ಚುವರಿ ಮಾಡದೆ ಅವರ ವಿದ್ಯಾರ್ಹತೆಗೆ ಅನುಗುಣವಾಗಿ ಅದೇ ಶಾಲೆಯಲ್ಲಿ ಮುಂದುವರಿಸಬೇಕು.

ಹಾಗಂತ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪರವಾಗಿ ರಾಜ್ಯಾಧ್ಯಕ್ಷ  ಶಂಭುಲಿಂಗನಗೌಡ ಪಾಟೀಲ ಹಾಗೂ ಪ್ರಧಾನ ಕಾರ್ಯದರ್ಶಿ  ಚಂದ್ರಶೇಖರ್ ನುಗ್ಗಲಿ ಸರಕಾರವನ್ನು ಆಗ್ರಹಿಸಿದ್ದಾರೆ.

ನೇರ ನೇಮಕಾತಿಗೆ ಕೇವಲ ಶೇ.25

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಈ ಬೇಡಿಕೆಯ ಅನುಸಾರ ಸರಕಾರ ನಡೆದುಕೊಂಡರೆ, ನೇರ ನೇಮಕಾತಿಯ ಪ್ರಮಾಣ ಶೇ.25 ಕ್ಕೆ ಸೀಮಿತವಾಗುತ್ತದೆ. ನೇಮಕಾತಿಯ ನಿರೀಕ್ಷೆಯಲ್ಲಿರುವ ನಿರುದ್ಯೋಗಿ ಅರ್ಹರಿಗೆ ಇದು ನಿಜಕ್ಕೂ ಆಘಾತಕಾರಿ.

ಸಂಘದ ನೀತಿ ಹೇಗಿದೆಯೆಂದರೆ, ಘೋಷಣೆಯಾಗಿರುವ ಹುದ್ದೆಗಳ ಬಹುಪಾಲು ತಮಗೇ ಇರಲಿ ಎಂಬಂತಿದೆ.

ಶಿಕ್ಷಣ ವ್ಯವಸ್ಥೆ ಅಧೋಗತಿಗೆ ಇಳಿಯಲು ಕಾರಣವಾದ ಅಂಶಗಳು ಸಾಕಷ್ಟಿವೆ. ವಿನಾಕಾರಣ ಶಿಕ್ಷಕರನ್ನು ಹಿಂಡುವ ಆಡಳಿತಶಾಹಿಯ ಕಿರುಕುಳವೂ ದೊಡ್ಡ ಪ್ರಮಾಣದಲ್ಲಿದೆ. ಇಂತಹ ವಿಷಯಗಳಿಗೆ ಹೋರಾಡುವ ಇಚ್ಛಾಶಕ್ತಿಯನ್ನು ಎಂದಿಗೂ ಪ್ರದರ್ಶಿಸದ ಸಂಘ ಈಗ ಹೊಸ ನೇಮಕಾತಿಯ ಪ್ರಮಾಣವನ್ನು ತಗ್ಗಿಸಲು ಹೋರಾಟ ನಡೆಸುವ ಬೆದರಿಕೆ ಒಡ್ಡಿರುವುದು ನಿಜಕ್ಕೂ ವಿಪರ್ಯಾಸ.

– ಚಾಮರಾಜ ಸವಡಿ | ಕೊಪ್ಪಳ
+1
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 567