ಕಿಮ್ಸ್‌: ಪೂರ್ಣಾವಧಿ ನಿರ್ದೇಶಕರ ನೇಮಕಕ್ಕೆ ವಿರೋಧ

ಈ ಸುದ್ದಿ ಹಂಚಿಕೊಳ್ಳಿ:
ವಿಜಯ ಪರ್ವ ವಿಶೇಷ | ಕೊಪ್ಪಳ

ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಕಿಮ್ಸ್‌ನೊಳಗಿನ ಆಂತರಿಕ ಸಂಘರ್ಷ ಮುಗಿಯುವ ಲಕ್ಷಣಗಳು ಕಂಡು ಬರುತ್ತಿಲ್ಲ. ಹದಿನೈದು ಹೊಸ ನೇಮಕಾತಿಗಳಿಗೆ ಅಧಿಸೂಚನೆ ಹೊರಬಿದ್ದಿರುವ ಬೆನ್ನ ಹಿಂದೆಯೇ, ಪೂರ್ಣಾವಧಿ ನಿರ್ದೇಶಕರ ಹುದ್ದೆ ಭರ್ತಿ ಮತ್ತೆ ನನೆಗುದಿಗೆ ಬಿದ್ದಿದೆ.

ಕಿಮ್ಸ್‌ಗೆ ಪೂರ್ಣಾವಧಿ ನಿರ್ದೇಶಕರನ್ನು ನೇಮಿಸಲು ಸರಕಾರ ಮುಂದಾಗುತ್ತಿಲ್ಲ ಎಂಬ ಆರೋಪಗಳಿದ್ದವು. ಆದರೆ, ಪೂರ್ಣಾವಧಿ ನಿರ್ದೇಶಕರ ನೇಮಕಕ್ಕೆ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಸಿದ್ಧವಿದ್ದರೂ, ಸ್ಥಳೀಯ ಸಂಸದರು ಮತ್ತು ಕಿಮ್ಸ್‌ನ ಕೆಲ ನಿರ್ದೇಶಕರು ಅದಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಿವೆ.

ಕಿಕ್‌ ಬ್ಯಾಕ್‌ ಮೇಲೆ ಕಣ್ಣು

ಕಿಮ್ಸ್‌ನ ಒಟ್ಟಾರೆ ಆಡಳಿತ ನಿರ್ವಹಣೆ ಹಾಗೂ ವೈದ್ಯಕೀಯ ಮೂಲ ಸೌಲಭ್ಯಗಳ ನಿರ್ಮಾಣದಲ್ಲಿ ದೊಡ್ಡಮೊತ್ತದ ಕಿಕ್‌ ಬ್ಯಾಕ್‌ ಸಿಗುತ್ತದೆ. ಪೂರ್ಣಾವಧಿ ನಿರ್ದೇಶಕರು ಬಂದರೆ, ಅದಕ್ಕೆ ಕೊಕ್ಕೆ ಬೀಳುತ್ತದೆ ಎಂಬ ಕಾರಣಕ್ಕೆ ಕೆಲ ನಿರ್ದೇಶಕರು ಹಾಗೂ ಯೋಜನೆಯ ಪರೋಕ್ಷ ಫಲಾನುಭವಿಗಳಲ್ಲಿ ಒಬ್ಬರಾಗಿರುವ ಸಂಸದ ಸಂಗಣ್ಣ ಕರಡಿ ಅದಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಸಂಸದ ಸಂಗಣ್ಣ ಕರಡಿ

ಇದಕ್ಕೆ ನಿದರ್ಶನ ಎಂಬಂತೆ ಕಿಮ್ಸ್‌ಗೆ ಪೂರ್ಣಾವಧಿ ನಿರ್ದೇಶಕರ ನೇಮಕಕ್ಕೆ ದಿನಾಂಕ 23-6-2020 ರಂದು ಹೊರಡಿಸಿದ್ದ ನೇಮಕಾತಿ ಅಧಿಸೂಚನೆಯನ್ನು ದಿನಾಂಕ 22-7-2021 ರಂದು ರದ್ದುಪಡಿಸಲಾಗಿದೆ. ಈ ರದ್ದತಿಯ ಹಿಂದೆ ಸ್ಥಳೀಯ ಸಂಸದ ಮತ್ತು ಹಾಲಿ ಹಂಗಾಮಿ ನಿರ್ದೇಶಕ ಡಾ. ವಿಜಯನಾಥ ಇಟಗಿ ಕೈವಾಡವಿದೆ ಎಂದು ಆರೋಪಿಸಲಾಗಿದೆ.

ಈ ಮಧ್ಯೆ, ಹಂಗಾಮಿ ನಿರ್ದೇಶಕರನ್ನಾಗಿ ಹುಬ್ಬಳ್ಳಿ ಕಿಮ್ಸ್‌ನ ಡಾ. ಡಿ.ಡಿ. ಬಂಟ್‌ ಅವರನ್ನು ನೇಮಿಸಲು ಸರಕಾರ ಮುಂದಾಯಿತು. ಆದರೆ, ಸಂಸದ ಸಂಗಣ್ಣ ಕರಡಿ ಎರಡು ಪತ್ರಗಳನ್ನು ಬರೆದು, ನೇಮಕಾತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ನಿರ್ದೇಶಕರ ಪೈಕಿ ಒಬ್ಬರನ್ನು ಹಂಗಾಮಿ ನಿರ್ದೇಶಕರನ್ನಾಗಿ ಮಾಡಬೇಕೆಂದು ಒತ್ತಡ ಹೇರಿದ್ದಾರೆ.

ಕಿಮ್ಸ್‌ ಹಂಗಾಮಿ ನಿರ್ದೇಶಕ ಡಾ. ವಿಜಯನಾಥ ಇಟಗಿ

ಹಂಗಾಮಿ ನಿರ್ದೇಶಕ ಹುದ್ದೆಗೆ ಹೊರಗಿನವರು ಬಂದರೆ, ತಮ್ಮ ಕೆಲಸ ಆಗುವುದಿಲ್ಲ. ಈಗ ನಡೆದಿರುವ ಮತ್ತು ಮುಂದೆ ನಡೆದಿರಬಹುದಾದ ಅಕ್ರಮಗಳನ್ನು ಸಮರ್ಥಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂಬುದು ಸಂಸದ ಈ ವಿರೋಧಕ್ಕೆ ಮೂಲ ಕಾರಣ ಎನ್ನಲಾಗಿದೆ.

ಈ ರಗಳೆಗಳ ನಡುವೆ ಹದಿನೈದು ಹುದ್ದೆಗಳ ನೇಮಕದ ಅಧಿಸೂಚನೆ ಹೊರಬಿದ್ದಿದೆ. ಕಿಮ್ಸ್‌ನ ಇದುವರೆಗಿನ ಹಿನ್ನೆಲೆ ನೋಡಿದರೆ, ಈ ನೇಮಕಾತಿಯಲ್ಲಿಯೂ ಗೋಲ್‌ಮಾಲ್‌ ನಡೆಯುವ ಸೂಚನೆಗಳಿವೆ.

ಈ ಎಲ್ಲ ಬೆಳವಣಿಗೆಗಳ ಕುರಿತು ಪ್ರತಿಕ್ರಿಯೆ ಪಡೆಯಲು ಕಿಮ್ಸ್‌ನ ಹಂಗಾಮಿ ನಿರ್ದೇಶಕ ಡಾ. ವಿಜಯನಾಥ ಇಟಗಿ ಅವರನ್ನು ಹಲವಾರು ಬಾರಿ ಸಂಪರ್ಕಿಸಿದರೂ, ಒಂದಲ್ಲ ಒಂದು ನೆವ ಹೇಳಿಕೊಂಡು ಭೇಟಿಯನ್ನು ಮುಂದೂಡುತ್ತಿದ್ದಾರೆ. ಕಿಮ್ಸ್‌ನಲ್ಲಿ ನಡೆದಿರುವ ಹಲವಾರು ಅಕ್ರಮಗಳನ್ನು ನೋಡಿದಾಗ, ಅವರ ಈ ಹಿಂಜರಿಕೆ ಆಕಸ್ಮಿಕವಲ್ಲ ಎಂಬುದು ಸ್ಪಷ್ಟವಾಗುತ್ತದೆ.

– ಚಾಮರಾಜ ಸವಡಿ | ಕೊಪ್ಪಳ
0
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 3763