ಟಿಬಿ ಡ್ಯಾಂ ಭರ್ತಿಗೆ ಕ್ಷಣಗಣನೆ; ನದಿ ಪಾತ್ರದ ಜನ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ

ವಿಜಯಪರ್ವ ಸುದ್ದಿ, ಹೊಸಪೇಟೆ/ ಕೊಪ್ಪಳ
ತುಂಗಭದ್ರಾ ಜಲಾಶಯ ಭರ್ತಿಗೆ ಕ್ಷಣಗಣನೆ ಆರಂಭವಾಗಿದ್ದು, ಯಾವುದೇ ಕ್ಷಣದಲ್ಲಿ ಸುಮಾರು 50 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಸಲಾಗುವುದು. ಈ ಹಿನ್ನೆಲೆಯಲ್ಲಿ ನದಿ ಪಾತ್ರದಲ್ಲಿನ ಜನರು ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ತುಂಗಭದ್ರ ಮಂಡಳಿ ಎಚ್ಚರಿಕೆ ನೀಡಿದೆ. ಕಳೆದ ಕೆಲ ದಿನದ ಹಿಂದೆಯೂ ಬೋರ್ಡ್ ಎಚ್ಚರಿಕೆ ನೀಡಿದ್ದು, ಇದು ಕೊನೆಯ ಸೂಚನೆ ಎಂದು ತಿಳಿಸಿದೆ. ನದಿ ಪಾತ್ರದಲ್ಲಿನ ಕುರಿಗಾಯಿಗಳು ಕೂಡ ಸುರಕ್ಷಿತ ಸ್ಥಳಕ್ಕೆ ಬರಬೇಕಿರುವ ತುರ್ತು ಅಗತ್ಯವಿದೆ.
ಟಿಬಿ ಬೋರ್ಡ್ ನ ಇಂದು ಬೆಳಗಿನ 8.30ರ ಮಾಹಿತಿಯಂತೆ, ಡ್ಯಾಂನಲ್ಲಿ 97.777 ಟಿಎಂಸಿ ನೀರು ಸಂಗ್ರಹವಾಗಿತ್ತು. ಜೊತೆಗೆ 33 ಸಾವಿರ ಒಳ ಹರಿವು ದಾಖಲಾಗುತ್ತಿದೆ. ಒಂದೊಮ್ಮೆ ಇದೇ ಕಡಿಮೆ ಪ್ರಮಾಣದ ಒಳ ಹರಿವು ದಾಖಲಾದರೂ ಸಂಜೆ ವೇಳೆಗೆ ಡ್ಯಾಂಗೆ 1.5 ಟಿಎಂಸಿ ನೀರು ಸೇರಲಿದೆ. ಆಗ ಇಂದು ಸಂಜೆ ವೇಳೆಗೆ ಡ್ಯಾಂ ಬಹುತೇಕ ಭರ್ತಿಯಾಗಲಿದ್ದು, ಒಳಹರಿವಿನ ಪ್ರಮಾಣ ನೋಡಿಕೊಂಡು ಗೇಟ್ ಮೂಲಕ ನದಿಗೆ ನೀರು ಬಿಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಇಂದು ಸಂಜೆ ತಪ್ಪಿದರೆ ನಾಳೆ ಬೆಳಗ್ಗೆ ತುಂಗಭದ್ರ ಜಲಾಶಯದ ಗೇಟ್ ಮೂಲಕ ನೀರು ನದಿಗೆ ನೀರು ಹರಿಯುವುದು ಖಚಿತವಾಗಿದೆ.
ನದಿ ಪಾತ್ರದ ರೈತರು ಖುಷ್: ನದಿ ಮೂಲಕ ನೀರು ಬಿಡುವ ಸುದ್ದಿ ನದಿ ಪಾತ್ರದ ಜನರಿಗೂ ಖುಷಿ ತಂದಿದೆ. ಜೊತೆಗೆ ನದಿಗೆ ದೊಡ್ಡ ದೊಡ್ಡ ಪೈಪ್ ಜೋಡಿಸಿ, ಕೆರೆ ತುಂಬಿಸಿಕೊಳ್ಳುವ ಯೋಜನೆ ವ್ಯಾಪ್ತಿಯ ರೈತರೂ ನದಿ ನೀರು ಬಿಡೋದನ್ನು ಎದುರು ನೋಡುತ್ತಿದ್ದರು. ಆದರೆ, ಒಳಹರಿವು ಕಡಿಮೆ ಇರುವುದರಿಂದ ದೊಡ್ಡ ಮಟ್ಟದ ನೀರು ನದಿಗೆ ಹರಿದು ಬರುವ ನಿರೀಕ್ಷೆ ಸದ್ಯಕ್ಕಿಲ್ಲ.